ಕರ್ನಾಟಕ

karnataka

ETV Bharat / state

ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ: ಶೀಘ್ರಗತಿಯಲ್ಲಿ ಕೆಲಸ ಪೂರ್ಣಗೊಳಿಸಲು ಬಿಬಿಎಂಪಿ ಸೂಚನೆ

ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳು, ಥಣಿಸಂದ್ರ ಮುಖ್ಯರಸ್ತೆ, ನಾಗರಾರ ಜಂಕ್ಷನ್​ನಿಂದ ಬಾಗಲೂರು ಜಂಕ್ಷನ್​ವರೆಗಿನ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಹೆಣ್ಣೂರು ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದ ಬಿಬಿಎಂಪಿ
ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದ ಬಿಬಿಎಂಪಿ

By

Published : Aug 19, 2020, 4:26 PM IST

ಬೆಂಗಳೂರು :ನಗರದ ಹಲವೆಡೆ ಲಾಕ್​ಡೌನ್ ಕಾರಣಗಳಿಂದ ಹಾಗೂ ಗುತ್ತಿಗೆದಾರರ ಸಮಸ್ಯೆಯಿಂದ ವೈಟ್ ಟಾಪಿಂಗ್ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳು, ಥಣಿಸಂದ್ರ ಮುಖ್ಯರಸ್ತೆ, ನಾಗರಾರ ಜಂಕ್ಷನ್​ನಿಂದ ಬಾಗಲೂರು ಜಂಕ್ಷನ್​ವರೆಗಿನ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಹೆಣ್ಣೂರು ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದ ಬಿಬಿಎಂಪಿ

ಥಣಿಸಂದ್ರ ಮುಖ್ಯರಸ್ತೆಯ ಸುಮಾರು 9.5 ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಥಣಿಸಂದ್ರ ಮುಖ್ಯರಸ್ತೆಯಲ್ಲಿ 110 ಹಳ್ಳಿಗಳಿಗೆ ಜಲಮಂಡಳಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ತ್ವರಿತವಾಗಿ ಮುಗಿಸಿ ಶೀಘ್ರ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಮಗಾರಿ ಪ್ರಾರಂಭವಾದ ಬಳಿಕ ವಾಹನ ಸವಾರರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಪರ್ಯಾಯ ಸಂಚಾರಿ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇನ್ನು ನಾಗವಾರ ಹೊರ ವರ್ತುಲ ರಸ್ತೆ ಮಾರ್ಗ ಹಾಗೂ ಮೇಲ್ಸೇತುವೆಯಲ್ಲಿ ಕಸ ಸಂಗ್ರಹವಾಗಿರುವುದನ್ನು ಕಂಡ ಕೂಡಲೇ ಕಸಗುಡಿಸುವ ಯಂತ್ರಗಳ ಮೂಲಕ ಸ್ವಚ್ಛಗೊಳಿಸುವಂತೆ ತಿಳಿಸಿದರು. ಹೆಣ್ಣೂರು ಮುಖ್ಯರಸ್ತೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ವೀಕ್ಷಣೆ ಮಾಡಲಾಯಿತು. ಈ ವೇಳೆ ನಿಯಮಾನುಸಾರ ರಸ್ತೆಯನ್ನು ನಾಲ್ಕು ಭಾಗ ಕತ್ತರಿಸದೆ, ಸಣ್ಣ ಜಲ್ಲಿಯನ್ನು ಹಾಕದೆ, ದೊಡ್ಡ-ದೊಡ್ಡ ಜಲ್ಲಿಯನ್ನು ಉಪಯೋಗಿಸಿ ರಸ್ತೆಗುಂಡಿ ಮುಚ್ಚುತ್ತಿರುವುದನ್ನು ಕಂಡ ಮೇಯರ್, ಅಧಿಕಾರಿಗಳ‌ನ್ನು ತರಾಟೆಗೆ ತೆಗೆದುಕೊಂಡರು.

ಹೆಣ್ಣೂರು ಮುಖ್ಯರಸ್ತೆಯ ಹೆಣ್ಣೂರು ಬಂಡೆಯ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ABOUT THE AUTHOR

...view details