ಬೆಂಗಳೂರು:''ಎಲ್ಲರೂ ರಾತ್ರಿ ಕನಸು ಕಂಡರೆ, ಕುಮಾರಸ್ವಾಮಿ ಹಗಲು ಕನಸು ಕಾಣುತ್ತಾರೆ'' ಎಂದು ಸಚಿವ ಜಮೀರ್ ಅಹಮದ್ ತಿರುಗೇಟು ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ 2024ರ ಚುನಾವಣೆ ನಿಲ್ಲಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ''ಕುಮಾರಸ್ವಾಮಿ ಅವರು ಡಿಕೆಶಿ ಮುಂದಿನ ಚುನಾವಣೆ ನಿಲ್ಲಲ್ಲ ಎಂದಿದ್ದಾರೆ. ಅದರ ಅರ್ಥ ಏನು? ಏನು ಬೇಕಾದರೂ ಆಗಬಹುದು. ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ಅಂತ ಇದ್ದಾರೆ. ಯಾವ ಕಾರಣಕ್ಕೆ ಜೈಲಿಗೆ ಹೋಗ್ತಾರೆ? ನನ್ನ ಪ್ರಕಾರ ಕಂಡಿಷನ್ ಹಾಕಿನೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರಬೇಕು. ಏಕೆಂದರೆ ಅಷ್ಟು ವಿಶ್ವಾಸದಲ್ಲಿ ಹೇಳುತ್ತಿದ್ದಾರೆ ಅಂದ್ರೆ, ಅಮಿತ್ ಶಾ ಜೊತೆ ಮೀಟಿಂಗ್ ಮಾಡಿದಾಗ ಈ ಕಂಡೀಶನ್ ಹಾಕಿರಬಹುದು'' ಎಂದು ಟಾಂಗ್ ನೀಡಿದರು.
''ನಾನು ಕುಮಾರಸ್ವಾಮಿ ಜೊತೆ ಇದ್ದವನು. ಯಾವುದಾದರು ಸರ್ಕಾರ ಐದು ವರ್ಷ ನಡೆಯುತ್ತೆ ಎಂದು ಅವರು ಹೇಳಿದ್ದಾರಾ? ಯಡಿಯೂರಪ್ಪ ಸರ್ಕಾರ ಎರಡು ತಿಂಗಳಲ್ಲಿ ಬೀಳುತ್ತೆ ಎಂದಿದ್ದರು. ಬೊಮ್ಮಾಯಿ ಸರ್ಕಾರ ಮೂರು ತಿಂಗಳಲ್ಲಿ ಬೀಳುತ್ತೆ ಎಂದಿದ್ದರು. ಈಗ ನಮ್ಮ ಸರ್ಕಾರ ಇದೆ. ಇವರ ಸರ್ಕಾರವೇ ಉಳಿಸಿಕೊಳ್ಳಲು ಆಗಿಲ್ಲ. ಒಂದೂವರೆ ವರ್ಷದಲ್ಲಿ ಅವರ ಸರ್ಕಾರ ಪತನ ಆಗಿತ್ತು. ನಮ್ಮ ಸರ್ಕಾರ ಪತನವಾಗಲು ಹೇಗೆ ಸಾಧ್ಯ? ಬಿಜೆಪಿಯವರು 104 ಶಾಸಕರಿದ್ದು, ಆಪರೇಷನ್ ಮಾಡಿ ಮೂರುವರೆ ವರ್ಷ ಸರ್ಕಾರ ನಡೆಸಿದರು. ನಾವು 137 ಎಂಎಲ್ಎಗಳಿದ್ದೇವೆ. ಇದು ಸಾಧ್ಯನಾ'' ಎಂದು ಪ್ರಶ್ನಿಸಿದರು.