ಬೆಂಗಳೂರು: 14 ದಿನಗಳ ಕೋವಿಡ್ ಕರ್ಫ್ಯೂ ವೇಳೆ ಸರ್ಕಾರದ ಕೆಲ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ ಹಾಗೂ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಿಬ್ಬಂದಿ ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಉಳಿದ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ವಿಕಲಾಂಗ ಸಿಬ್ಬಂದಿ ಹಾಗೂ ಗರ್ಭಿಣಿಯರಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ಸಿಕ್ಕಿದೆ.
ಕೋವಿಡ್ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕೆಂದು ಆದೇಶ ಹೊರಡಿಸಲಾಗಿದೆ.