ದೇಶಾದ್ಯಂತ ವಿವಿಧ ಸಚಿವಾಲಯಗಳಲ್ಲಿ ಸುಮಾರು ೬.೮೩ ಲಕ್ಷ ಹುದ್ದೆಗಳು ಖಾಲಿ ಉಳಿದಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಇತ್ತೀಚೆಗೆ ಘೋಷಣೆಯೊಂದನ್ನು ಮಾಡಿತು. ನೇಮಕಾತಿಯನ್ನು ವರ್ಷಗಟ್ಟಲೇ ನಿರ್ಲಕ್ಷ್ಯಿಸಿಕೊಂಡು ಬರಲಾದ ಧೋರಣೆಯ ಮರಣ ಶಾಸನದಂತಿದೆ ಈ ಘೋಷಣೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇದ್ದಾಗ್ಯೂ ಮತ್ತು ದೊಡ್ಡ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿದ್ದಾಗ್ಯೂ, ನೇಮಕಾತಿ ಪ್ರಕ್ರಿಯೆ ಮಾತ್ರ ಸುಗಮವಾಗಿ ನಡೆಯುತ್ತಲೇ ಇಲ್ಲ. ಸರ್ಕಾರದ ನೀತಿಗಳ ವೈಫಲ್ಯತೆಯೇ ಇದಕ್ಕೆ ಕಾರಣ. ಇದು ಸರ್ಕಾರದ ಆಡಳಿತ, ಸಾರ್ವಜನಿಕ ಸೇವೆಗಳು ಮತ್ತು ಯುವಜನತೆಯ ಅವಕಾಶಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.
ದೇಶಾದ್ಯಂತ ೪೦ ಲಕ್ಷ ನಿರುದ್ಯೋಗಿಗಳು ಪ್ರತಿ ವರ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ದೇಶದ ೯೯೭ ಉದ್ಯೋಗ ಕೇಂದ್ರಗಳಲ್ಲಿ ದಾಖಲಾಗಿರುವ ನಿರುದ್ಯೋಗಿಗಳ ಸಂಖ್ಯೆ ೫.೨ ಕೋಟಿಗೂ ಅಧಿಕ. ಅನಧಿಕೃತ ಅಂದಾಜಿನ ಪ್ರಕಾರ, ಈ ಸಂಖ್ಯೆ ೭ ಕೋಟಿಗೂ ಹೆಚ್ಚು. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ (ನ್ಯಾಶನಲ್ ಸ್ಯಾಂಪಲ್ ಸರ್ವೇ ಆರ್ಗನೈಜೇಷನ್ – ಎನ್‌ಎಸ್‌ಎಸ್‌ಒ) ಇತ್ತೀಚಿನ ಸಮೀಕ್ಷೆಯ ವರದಿಯನ್ನು ರಹಸ್ಯವಾಗಿ ಇಡಲಾಗಿದೆ. ಆ ವರದಿಯ ಪ್ರಕಾರ, ನಿರುದ್ಯೋಗದ ಪ್ರಮಾಣ ಏರುಗತಿಯಲ್ಲಿದ್ದು, ಸರ್ಕಾರ ಅಥವಾ ಖಾಸಗಿ ವಲಯಗಳಲ್ಲಿ ಉದ್ಯೋಗದ ಅವಕಾಶಗಳೇ ಸಿಗುತ್ತಿಲ್ಲ. ಮಾರ್ಚ್ ೨೦೧೮ರವರೆಗಿನ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಸ್ತುತ ೩೮,೦೨,೭೭೯ ಹುದ್ದೆಗಳಿದ್ದು ಉದ್ಯೋಗಿಗಳ ಸಂಖ್ಯೆ ೩೧,೧೮,೯೫೬. ಅಂದರೆ, ಇನ್ನು ೬,೮೩,೮೨೩ ಹುದ್ದೆಗಳು ಖಾಲಿ ಇವೆ. ನಿವೃತ್ತಿ, ಮರಣ ಹಾಗೂ ಬಡ್ತಿಯಿಂದಾಗಿ ಕಳೆದ ಒಂದೂವರೆ ವರ್ಷದಲ್ಲಿ ೧.೫ ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ.
ಈ ಖಾಲಿ ಹುದ್ದೆಗಳ ಪೈಕಿ ರೈಲ್ವೆ ಇಲಾಖೆಯೊಂದರಲ್ಲಿಯೇ ೧,೧೬,೩೯೧ ಹುದ್ದೆಗಳಿವೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ದೇಶದ ಈ ಪ್ರಮುಖ ಸಾರಿಗೆ ಸೇವಾ ವ್ಯವಸ್ಥೆಯ ಸೇವಾ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಮಹತ್ವದ ರಕ್ಷಣಾ ಇಲಾಖೆಯಲ್ಲಿಯೂ ನೇಮಕಾತಿ ಪ್ರಮಾಣ ತೀರಾ ದುರ್ಬಲವಾಗಿದೆ. ಭೂಸೇನೆಯಲ್ಲಿ ೬,೮೬೭, ನೌಕಾಪಡೆಯಲ್ಲಿ ೧,೫೦೦ ಹಾಗೂ ವಾಯುದಳದಲ್ಲಿ ೪೨೫ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇನ್ನು ಭೂಸೇನೆಯಲ್ಲಿ ೩೬,೫೧೭ ಕಿರಿಯ ಅಧಿಕಾರಿಗಳು, ನೌಕಾಪಡೆಯಲ್ಲಿ ೧೫,೫೯೦ ನಾವಿಕರು ಹಾಗೂ ವಾಯುದಳದಲ್ಲಿ ೧೦,೪೨೫ ಏರ್‌ಮನ್ ಹುದ್ದೆಗಳು ಖಾಲಿ ಇವೆ. ೪೮ ವಿಶ್ವವಿದ್ಯಾಲಯಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ವಾರ್ಷಿಕ ೨೨,೦೦೦ಕ್ಕೂ ಹೆಚ್ಚು ಹುದ್ದೆಗಳು ಕಡಿತವಾಗುತ್ತಿವೆ. ಇನ್ನೊಂದೆಡೆ, ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ೨೦೧೯ರವರೆಗೆ ೧೬ ಲಕ್ಷದಷ್ಟು ಭಾರಿ ಸಂಖ್ಯೆಯಲ್ಲಿ ಹುದ್ದೆಗಳು ಭರ್ತಿಯಾಗದೇ ಉಳಿದಿವೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಿಂದ ಹಿಡಿದು ನಾಗಲ್ಯಾಂಡ್‌ನಂತಹ ಪುಟ್ಟ ರಾಜ್ಯದವರೆಗೆ, ಹಲವು ರಾಜ್ಯಗಳಲ್ಲಿ ಸಾವಿರಾರು ಹುದ್ದೆಗಳು ಭರ್ತಿಯಾಗಬೇಕಿವೆ.
ಅವಶ್ಯಕ ಸೇವೆಗಳ ಇಲಾಖೆಯಲ್ಲಿಯೂ ಹುದ್ದೆಗಳು ಖಾಲಿ ಇವೆ. ದೆಹಲಿಯ ಸಂಪುಟ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಇತರ ಇಲಾಖೆಗಳಲ್ಲಿ ಸಾಕಷ್ಟು ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿವೆ. ರಾಜ್ಯಗಳಲ್ಲಿ ಸಹ ಉದ್ಯೋಗಿಗಳ ಕೊರತೆಯಿಂದಾಗಿ ಆಡಳಿತಾತ್ಮಕ ಸಮಸ್ಯೆಗಳು ಉಂಟಾಗುತ್ತಿವೆ. ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದಾಗಿ ಭವಿಷ್ಯದ ನೇಮಕಾತಿ ಕೂಡಾ ಪ್ರಶ್ನಾರ್ಹವಾಗಿದೆ.