ಬೆಂಗಳೂರು :ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯ ಪ್ರತಿಭಟನೆ ಯಾವಾಗ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ. ಹಿಂದೆ ತಾವು ಅಧಿಕಾರದಲ್ಲಿದ್ದಾಗ "ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದ ರಾಜ್ಯ ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ? ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆ ಯಾವಾಗ? ಎಂದು ಕೇಳಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ. ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿ ಅವರಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕಾದ ಪತ್ರಕರ್ತೆಯನ್ನು ಬಿಜೆಪಿಯ ಟ್ರಾಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ. ಭಾರತದಲ್ಲಿ ಪತ್ರಕರ್ತರನ್ನು ಹತ್ತಿಕ್ಕಿದಂತೆ ಅಮೆರಿಕಾದಲ್ಲೂ ಹತ್ತಿಕ್ಕಲು ಮುಂದಾಗುವ ಬಿಜೆಪಿಯ ಟೂಲ್ ಕಿಟ್ ಆರ್ಮಿಗೆ ದೇಶದ ಘನತೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು. ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು. ಇದೀಗಾ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ. ಅಂದಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕಿರಬಹುದು ರಾಜ್ಯ ಬಿಜೆಪಿ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.