ಬೆಂಗಳೂರು: ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಪ್ಯಾನಿಕ್ ಆಗಿ, ಬೆಡ್ ಬೇಕು ಎಂಬ ಕೂಗು ಎದ್ದಿದೆ. ಶೇ. 90 ರಷ್ಟು ಜನರಿಗೆ ಬೆಡ್ ಅಗತ್ಯ ಇರುವುದಿಲ್ಲ. ಮನೆಯ ಆರೈಕೆಯಲ್ಲೇ ಗುಣಮುಖರಾಗಬಹುದು. ತುಂಬಾ ಸೀರಿಯಸ್ ಇದ್ದಾಗ ಮಾತ್ರ ಆಸ್ಪತ್ರೆ ಬೆಡ್ ಅಗತ್ಯ ಬೀಳುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಬೆಡ್ ಬುಕ್ಕಿಂಗ್ಗೆ ಒಂದೇ ಹೆಲ್ಪ್ಲೈನ್ ಇದ್ದರೆ ಜನರಿಗೆ ಅನುಕೂಲವಾಗಲಿದೆ. ಇದರಿಂದ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುವುದೂ ತಪ್ಪುತ್ತದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆಗೂ ಚರ್ಚಿಸಲಾಗಿದೆ ಎಂದರು. ಐಸಿಯು ಬೆಡ್ ಲಭ್ಯತೆ ಸೀಮಿತವಾಗಿದೆ. ಈಗಾಗಲೇ 600 ಐಸಿಯು ಬೆಡ್ಗಳು ಭರ್ತಿಯಾಗಿವೆ. ಐಸಿಯು ಬೆಡ್ ಸಂಖ್ಯೆ ಹೆಚ್ಚಿಸಲಾಗುವುದು. ಕನಿಷ್ಠ 200 ಹೆಚ್ಚಾಗುವ ನಿರೀಕ್ಷೆ ಇದೆ. ಆದರೂ ಐಸಿಯು ಬೆಡ್ಗಳ ಸಂಖ್ಯೆ ಸಾಲುವುದಿಲ್ಲ ಎಂದು ತಿಳಿಸಿದರು.
ಸರ್ಕಾರದಿಂದ ಹೊಸ ಐಸಿಯು ತಾತ್ಕಾಲಿಕ ಆಸ್ಪತ್ರೆ:ಸರ್ಕಾರ ಸಾವಿರ ಬೆಡ್ಗಳ ಹೊಸ ಐಸಿಯು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಿದೆ. ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲ ಆಗಲಿದೆ. ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನೂ ಮಾಡಲಾಗಿದೆ ಎಂದರು.