ಬೆಂಗಳೂರು: ಈ ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದ ಕತೆ ಏನಾಗುವುದೋ ದೇವರೇ ಬಲ್ಲ ಎಂದು ಹಾಸನ ಜಿಲ್ಲೆಯ ಮುನ್ಸಿಪಲ್ ಕಾಂಗ್ರೆಸ್ ನಗರ ಯೋಜನೆ ಅಧ್ಯಕ್ಷ ಮಲ್ಲೇಶ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹೇಮಾವತಿ ನೀರನ್ನೇ ಸಮರ್ಪಕವಾಗಿ ನೀಡದ ಇವರು ಯಾವ ನೈತಿಕತೆಯಿಂದ ಮತ ಕೇಳುತ್ತಾರೆ. ಹೇಗೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೋ ಗೊತ್ತಾಗುತ್ತಿಲ್ಲ. ಹಾಸನದಲ್ಲಿ ಜೆಡಿಎಸ್ನವರು ಯಾವುದೇ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮನೆಗೆ ಭೇಟಿ ಕೊಟ್ಟಿಲ್ಲ. ಬದಲಾಗಿ ಹುಡುಕಿ ಹುಡುಕಿ ಸಕಲೇಶಪುರದ ಒಕ್ಕಲಿಗರ ಮನೆಗೆ ಭೇಟಿ ಕೊಡುತ್ತಿದ್ದಾರೆ. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲೇ ಇಲ್ಲ. ಪಂಚಾಯಿತಿ, ಮುನ್ಸಿಪಲ್, ಜಿಲ್ಲಾ ಪಂಚಾಯಿತಿ ಸದಸ್ಯ ಕೂಡ ಅಲ್ಲದ ಹುಡುಗನಿಗೆ ಮತ ಕೊಡುವುದು ಹೇಗೆ? ನಾವು ಜನರ ಮುಂದೆ ಹೋಗೋದು ಹೇಗೆ ಎಂದು ಸಿದ್ದರಾಮಯ್ಯಗೆ ವಿವರಿಸುವ ಕಾರ್ಯ ಮಾಡಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾವೇರಿ ನಿವಾಸ ಸಿದ್ದರಾಮಯ್ಯಗೆ ಚೂರಿ :
ಇದೇ ಜೆಡಿಎಸ್ ನಾಯಕರು ಸಿದ್ದರಾಮಯ್ಯಗೆ 1991, 94 ಹಾಗೂ 99 ರಲ್ಲಿ ಮೂರು ಸಾರಿ ಚೂರಿ ಹಾಕಿದ್ದಾರೆ. ಆಗ ನಾನು ಕೂಡ ಅಹಿಂದ ನಾಯಕನಾಗಿದ್ದೆ. ಸಿದ್ದರಾಮಯ್ಯ ಶಿಷ್ಯ ನಾನು, ಈಗ ಈ ಸ್ಥಿತಿಗೆ ಅವರೇ ಪರಿಹಾರ ಸೂಚಿಸಬೇಕು ಎಂದರು.
ಕಾವೇರಿಯಲ್ಲಿ ಸಭೆ:
ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಎಂಎಲ್ಸಿ ಗೋಪಾಲಸ್ವಾಮಿ, ಮಾಜಿ ಐಎಎಸ್ ಅಧಿಕಾರಿ ಸಿದ್ದಯ್ಯ, ಮಾಜಿ ಸಚಿವ ಗಂಡಸಿ ಶಿವರಾಂ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ತಾಲೂಕು ಅಧ್ಯಕ್ಷರು, ವಿವಿಧ ಘಟಕಗಳ ಮುಖಂಡರು ಭಾಗಿಯಾಗಿದ್ದಾರೆ. ಅಲ್ಲದೆ ನೂರಾರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಅಹವಾಲು ಸಲ್ಲಿಕೆ:
ಸಿದ್ದರಾಮಯ್ಯ ಮುಂದೆ ಹಾಸನ ಮುಖಂಡರ ಅಹವಾಲು ಸಲ್ಲಿಕೆಯಾಯಿತು. ನೀವು ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿ ಅಂತೀರ. ಆದ್ರೆ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದು ಗೊತ್ತಾ? ರೇವಣ್ಣ ಸರ್ವಾಧಿಕಾರಿಯಂತೆ ನಡೆದುಕೊಳ್ತಾರೆ. ಎಲ್ಲಾ ಅಧಿಕಾರಿಗಳು ಅವರು ಹೇಳಿದಂತೆ ಕೇಳ್ತಾರೆ. ನಮ್ಮ ಯಾವುದೇ ಕೆಲಸಗಳು ಆಗುವುದಿಲ್ಲ. ಸಣ್ಣ ಪುಟ್ಟ ಜಗಳಕ್ಕೂ ಕಾರ್ಯಕರ್ತರ ಮೇಲೆ ಕೇಸ್ ಹಾಕ್ತಾರೆ. ಅಲ್ಲಿ ಜೆಡಿಎಸ್ ಕಾರ್ಯಕರ್ತರು ರಾಜರಂತೆ ಆಡ್ತಿದ್ದಾರೆ. ನಾವೇನೋ ಕಾಂಪ್ರಮೈಸ್ ಮಾಡಿಕೊಳ್ಳೋಕೆ ರೆಡಿ. ಆದರೆ, ಅದಕ್ಕೂ ಅವರು ನಮ್ಮನ್ನ ಬಿಟ್ಟುಕೊಳ್ಳಲ್ಲ ಎಂದರು.
ಹಾಸನ ಜಿಲ್ಲಾ ನಾಯಕರು ಜೆಡಿಎಸ್ಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಕ್ಕೆ ಸಿದ್ದರಾಮಯ್ಯ ಎದುರಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನವನ್ನು ಯಾವುದೇ ಕಾರಣಕ್ಕೂ ಜೆಡಿಎಸ್ಗೆ ಬಿಟ್ಟುಕೊಡಬಾರದು. ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಜೆಡಿಎಸ್ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಲ್ಲಿ ನಮಗೆ ಅಪಾರ ನಷ್ಟವಾಗುತ್ತದೆ. ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕ ಎ.ಮಂಜು ಕೂಡ ಪಕ್ಷವನ್ನು ತೊರೆದು ಪಕ್ಷಕ್ಕೆ ಇನ್ನಷ್ಟು ನಷ್ಟವಾಗದಂತೆ ತಡೆಯುವಂತೆ ಕಾರ್ಯಕರ್ತರು ಸಿದ್ದರಾಮಯ್ಯ ಬಳಿ ಮನವಿ ಮಾಡಿದರು.