ಕರ್ನಾಟಕ

karnataka

ETV Bharat / state

karnataka budget 2023:ಸಿದ್ದರಾಮಯ್ಯ ಬಜೆಟ್​ನಲ್ಲಿ ಪ್ರವಾಸೋದ್ಯಮ ವಲಯಕ್ಕೆ ಸಿಕ್ಕಿದ್ದೇನು? ಇಲ್ಲಿದೆ ವಿವರ - etv bharat kannda

ಬಜೆಟ್​ನಲ್ಲಿ ಪ್ರವಾಸೋದ್ಯಮ ವಲಯಕ್ಕೆ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸೀ ತಾಣಗಳ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆದ್ಯತೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಸಿದ್ದರಾಮಯ್ಯ ಬಜೆಟ್​ನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಿಕ್ಕ ಅನುದಾನ ಮತ್ತು ಯೋಜನೆಗಳ ಕುರಿತ ಪಕ್ಷಿನೋಟ ಇಲ್ಲಿದೆ.

what-tourism-department-get-in-siddaramaiah-budget
karnataka budget 2023:ಸಿದ್ದರಾಮಯ್ಯ ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು? ಇಲ್ಲಿದೆ ವಿವರ

By

Published : Jul 7, 2023, 6:00 PM IST

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಕಲ್ಪನೆಗಳನ್ನು ಅನುಷ್ಠಾನಗೊಳಿಸಲು ಮಾಸ್ಟರ್‌ ಪ್ಲಾನ್‌ ಅನ್ನು ತಯಾರಿಸುವ ಘೋಷಣೆ ಬಜೆಟ್ ನಲ್ಲಿ ಮಾಡಲಾಗಿದ್ದು, ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸೀ ತಾಣಗಳ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆದ್ಯತೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ, ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪಾರಂಪರಿಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿರುವುದರಿಂದ ಅಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಯ ಭರವಸೆ ನೀಡಿದ್ದು, ʻಒಂದು ರಾಜ್ಯ ಹಲವು ಜಗತ್ತುʼ ಎಂಬ ಘೋಷವಾಕ್ಯದಂತೆ ಕರ್ನಾಟಕವು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದ್ದರೂ, ಅದರ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಕಲ್ಪನೆಗಳನ್ನು ಅನುಷ್ಠಾನಗೊಳಿಸಲು ಮಾಸ್ಟರ್‌ ಪ್ಲಾನ್‌ ಅನ್ನು ತಯಾರಿಸಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳಾದ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ ಮತ್ತು ಮಳಖೇಡ, ಬೀದರ್‌, ರಾಯಚೂರು ಹಾಗೂ ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ಧಿಗಾಗಿ 75 ಕೋಟಿ ರೂ, ಕಿತ್ತೂರು ಕರ್ನಾಟಕ ಭಾಗದಲ್ಲಿನ ಸವದತ್ತಿ ಯಲ್ಲಮ್ಮನ ಗುಡ್ಡ, ದೇವರಗುಡ್ಡ, ಕಪ್ಪತ್ತಗುಡ್ಡ, ಬಾದಾಮಿ ಬನಶಂಕರಿ, ಲಕ್ಕುಂಡಿ ಪ್ರವಾಸಿ ತಾಣಗಳನ್ನು ಮತ್ತು ಗದಗ ಜಿಲ್ಲೆಯ ಮಾಗಡಿ ಪಕ್ಷಿಧಾಮದ ಸಮಗ್ರ ಅಭಿವೃದ್ಧಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್‌ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚನೆ ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯನ್ನು ತಯಾರಿಸುವುದಾಗಿ ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್‌ ತಾಣವಾಗಿ ಅಭಿವೃದ್ಧಿಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ. ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯಾತ್ರಿನಿವಾಸ ಅಥವಾ ಡಾರ್ಮಿಟರಿಗಳನ್ನು ನಿರ್ಮಾಣ. ಮೈಸೂರಿನ ಹೃದಯ ಭಾಗದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವುದು. ರಾಜ್ಯದಲ್ಲಿರುವ 16 ವಸ್ತುಸಂಗ್ರಹಾಲಯಗಳನ್ನು ಹಂತ ಹಂತವಾಗಿ ಆಕರ್ಷಕ ಮತ್ತು ಸಂವಾದಾತ್ಮಕವಾಗಿ ಅಭಿವೃದ್ಧಿ. ಈ ಆರ್ಥಿಕ ಸಾಲಿನಲ್ಲಿ ಕಲಬುರಗಿ, ಗದಗ ಮತ್ತು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯಗಳ ಅಭಿವೃದ್ಧಿಪಡಿಸಲು ಮತ್ತು ವಿಜಯಪುರದಲ್ಲಿರುವ ಆನಂದಮಹಲ್ ಕಟ್ಟಡವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.

ಮೈಸೂರಿನಲ್ಲಿ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಕಾರಣದಿಂದ, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿನ ಎರಡೂವರೆ ಎಕರೆ ಜಮೀನಿನಲ್ಲಿ ಕರ್ನಾಟಕದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು Augmented Reality (AR) ಮತ್ತು Virtual Reality (VR) ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ʻಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿʼ ನಿರ್ಮಾಣ ಮಾಡುವುದಾಗಿ ಫೋಷಿಸಲಾಗಿದೆ.

ರಾಜ್ಯದಲ್ಲಿರುವ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯವಿಠಲ ದೇವಸ್ಥಾನ, ಬೀದರ್ ಕೋಟೆ, ನಂದಿಬೆಟ್ಟದ ಭೋಗನಂದೀಶ್ವರ ದೇವಸ್ಥಾನ, ವಿಜಯಪುರದ ಗೋಲಗುಂಬಜ್, ಕಿತ್ತೂರು ಕೋಟೆ ಮತ್ತು ಬಾದಾಮಿ ಗುಹೆಗಳ ಬಳಿ ರಾತ್ರಿ ವೇಳೆ ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು ಹಾಗೂ ಕರ್ನಾಟಕ ರಾಜ್ಯದ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಲು 3D ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸೌಂಡ್ ಮತ್ತು ಲೈಟ್ ಷೋ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಬಜೆಟ್: 'ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು'

ABOUT THE AUTHOR

...view details