ಕರ್ನಾಟಕ

karnataka

ETV Bharat / state

ಯಾವ ಮುಖ ಇಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಹಸಿ ಸುಳ್ಳು ಹೇಳುತ್ತಿದ್ದೀರಿ: ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಟಾಂಗ್ - political news

ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಜೆಡಿಎಸ್​ ಸರಣಿ ಟ್ವೀಟ್ -​ ಸಚಿವರ ವಿರುದ್ಧ ಆಕ್ರೋಶ - ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟರೆ, ಜನತೆ ನಿಮಗೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ

what-kind-of-face-are-you-telling-lies-about-deve-gowdas-family-jds-tong-to-minister-madhuswamy
ಯಾವ ಮುಖ ಇಟ್ಟು ದೇವೇಗೌಡರ ಕುಟುಂಬದ ಬಗ್ಗೆ ಹಸಿಸುಳ್ಳು ಹೇಳುತ್ತಿದ್ದೀರಿ: ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಟಾಂಗ್

By

Published : Jan 23, 2023, 5:25 PM IST

ಬೆಂಗಳೂರು : ಯಾವ ಮುಖ ಇಟ್ಟುಕೊಂಡು ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡರ ಕುಟುಂಬದ ಬಗ್ಗೆ ಜನತೆಯ ಮುಂದೆ ಹಸಿ ಸುಳ್ಳು ಹೇಳುತ್ತಿದ್ದೀರಿ ಎಂದು ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಕಿಡಿಕಾರಿದೆ. ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್ ‌ಮಾಡಿರುವ ಜೆಡಿಎಸ್ ಪಕ್ಷ, ನೆಟ್ಟಗೆ ಆಡಳಿತ ನಡೆಸಲು ಬಾರದ ರಾಜ್ಯ ಬಿಜೆಪಿ ಸರ್ಕಾರದ ಕುಕೃತ್ಯಗಳಿಗೆ ಬೌದ್ಧಿಕ ಪೋಷಾಕು ತೊಡಿಸಿ, ಸಮರ್ಥನೆಗೆ ಇಳಿಯುವ ಮೊಂಡುವಾದಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರೇ, ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಅಥವಾ ಈ ರೀತಿ ಮಾತಿನಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರವೇ? ಎಂದು ಪ್ರಶ್ನಿಸಿದೆ.

ಆಡಳಿತ ನಡೆಸುವ ಬದಲು ಸರ್ಕಾರವು ಏನೋ ಒಂದು ನಿಭಾವಣೆ ಮಾಡುತ್ತಾ, ಕಾಲತಳ್ಳುತ್ತಿದೆ ಎಂದು ಹೇಳಿದ ಭೂಪ ನೀವೇ ಅಲ್ಲವೆ?, 40 ಪರ್ಸೆಂಟ್​ ಕಮಿಷನ್ ಸರ್ಕಾರವೆಂದೇ ಕುಖ್ಯಾತವಾಗಿರುವ ನಿಮ್ಮ ಸರ್ಕಾರ ದೋಚುತ್ತಿರುವ ಸಾರ್ವಜನಿಕರ ಹಣದ ಬಗ್ಗೆ ಲೆಕ್ಕ‌ ಇದೆಯೆ? ಎಂದು ಜೆಡಿಎಸ್​ ಕುಟುಕಿದೆ.

ಇದನ್ನೂ ಓದಿ:ಆಪರೇಷನ್‌ ಕಮಲವೆಂಬ ಕೊಳಕು ರಾಜಕೀಯಕ್ಕೆ 'ಸಿದ್ದಪುರುಷ'ರು ಸಿದ್ದರಾಮಯ್ಯ: ಹೆಚ್‌ಡಿಕೆ

ಮಾಧುಸ್ವಾಮಿ ಅವರೆ, ದೇವೇಗೌಡರು ಕೆಳಮಟ್ಟದಿಂದ ಬೆಳೆದು ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದವರು. ರಾಜ್ಯದ ಜನತೆಯ ಸ್ವಾಭಿಮಾನ ಮತ್ತು ನೆಮ್ಮದಿ ಕಾಪಾಡಲು ಈ ಇಳಿವಯಸ್ಸಲ್ಲೂ ಅವರು ಕೆಲಸ ಮಾಡುತ್ತಿದ್ದಾರೆ. ಸವೆಸಿದ ಹಾದಿಯ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಹೆಮ್ಮೆಯಿದೆ. ಹಲಾಲುಟೋಪಿ ಕೆಲಸ ಮಾಡುತ್ತಾ ಮೇಲೆ ಬಂದವರಲ್ಲ ಅವರು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ.

ಸೋಲು-ಗೆಲುವುಗಳಿಂದ ಯಾರೂ ಹೊರತಾಗಿಲ್ಲ. ಆದರೆ, ಅಧಿಕಾರವಿಲ್ಲದಿದ್ದರೂ ಕನ್ನಡಿಗರ ಏಳಿಗೆಗೆ ಪ್ರಾಮಾಣಿಕವಾಗಿ ದುಡಿಯುವ ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟರೆ, ಜನತೆ ನಿಮಗೆ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ನಿಮ್ಮ ದುರಹಂಕಾರದ ಕತೆ ರಾಜ್ಯದ ಜನತೆಗೆ ಗೊತ್ತೇ ಇದೆ ಎಂದು ಜೆಡಿಎಸ್​ ಪಕ್ಷವು ಟ್ವಿಟ್ಟರ್​ನಲ್ಲಿ ಸರಣಿ ಟ್ವೀಟ್​ ಮಾಡಿ ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟ ಎಂಬಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ದೇವೇಗೌಡರ ಕುಟುಂಬದಲ್ಲಿ ಎಲ್ಲರೂ ದೋಚಲು ಪ್ರಾರಂಭಿಸಿದ್ದಾರೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದರು. ಸಚಿವರು ಕಾರ್ಯಕ್ರಮದಲ್ಲಿ ಮಾತನಾಡುತ್ತ, ‘‘ಪಂಚರತ್ನ ಯಾತ್ರೆಯಲ್ಲಿ ನನ್ನ ವಿರುದ್ದ ಭಾಷಣ ಮಾಡುತ್ತಾರೆ. ತಾಲೂಕು ಅಭಿವೃದ್ಧಿ ಆಗಿಲ್ಲ ಅಂತೆ. ನಾನು ಅಭಿವೃದ್ಧಿ ಆಗಿದಿನಿ ಅಂತೆ. ಹೊಳೆನರಸೀಪುರದಲ್ಲಿ ಇವರಪ್ಪಗೆ 50 ರೂ. ಕೊಟ್ಟು ಕಂಟ್ರಾಕ್ಟರ್ ಕೆಲಸ ಶುರುಮಾಡಿದ್ದು ಯಾರು?.’’

‘‘ನನಗೇನೂ ಆಸ್ತಿ ಕೊರತೆ ಇರಲಿಲ್ಲ, ನಮ್ಮಪ್ಪ ಚೆನ್ನಾಗಿ ಇಟ್ಟಿದ್ದ,‌ ನಮ್ಮಪ್ಪ ನಮ್ಮಜ್ಜ‌ ಚೆನ್ನಾಗಿ ಬಾಳಿದವರೇ. ಇವ್ರಂಗೆ ದೋಚಿದ್ದು ಬಾಚಿದ್ದು ಪ್ರಕರಣಗಳು ನಮ್ಮಗಿಲ್ಲ, ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲಾ ದೋಚೋಕೆ ಶುರು ಮಾಡಿದ್ದಾರೆ’’, ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಚಿವ ಜೆ ಸಿ ಮಾಧುಸ್ವಾಮಿ ಹರಿಹಾಯ್ದಿದ್ದರು.

ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ರಾಜ್ಯ ಹಾಗೂ ದೇಶವನ್ನು ಹಾಳು ಮಾಡುತ್ತಿವೆ: ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details