ಬೆಂಗಳೂರು/ಮಂಗಳೂರು: ಸಮುದಾಯವಾರು ಮೂವರು ಡಿಸಿಎಂ ಆಗಬೇಕೆನ್ನುವ ವಿಚಾರದಲ್ಲಿ ತಪ್ಪೇನಿದೆ?. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ. ಕುಮಾರಕೃಪ ಅತಿಥಿ ಗೃಹದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ಗೆ ಸರಿ ಅನ್ನಿಸಿದರೆ ಮಾಡುತ್ತಾರೆ. ಬೇಡ ಅಂದರೆ ಬಿಡುತ್ತಾರೆ. ಸಿದ್ದರಾಮಯ್ಯ ಅವರು ಈ ಮಾತನ್ನು ನನ್ನಿಂದ ಹೇಳಿಸುತ್ತಿದ್ದಾರೆ ಅನ್ನುವುದು ತಪ್ಪು. ನಾನು ಈ ವಿಚಾರವಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚು ಡಿಸಿಎಂ ಮಾಡಿದರೆ ಡಿ.ಕೆ ಶಿವಕುಮಾರ್ ಅವರಿಗೆ ಪ್ರಾಮುಖ್ಯತೆ ಕಡಿಮೆ ಮಾಡಲಾಗುತ್ತದೆ ಅನ್ನೋದು ತಪ್ಪು. ಲೋಕಸಭೆ ಚುನಾವಣೆ ಬಹಳ ಮುಖ್ಯವಾದದ್ದು. ಅದರ ಗೆಲುವಿಗಾಗಿ ಈ ಸೂತ್ರ ಹೇಳಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶ ಇಲ್ಲ. ಇವತ್ತಿನ ಚುನಾವಣಾ ವ್ಯವಸ್ಥೆ ನೋಡಿದಾಗ ಜಾತಿ ಬಹಳ ಪ್ರಾಮುಖ್ಯತೆ ವಹಿಸುತ್ತಿದೆ. ಆದ್ದರಿಂದ ಸಮುದಾಯವಾರು ಮೂವರು ಡಿಸಿಎಂ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ನನ್ನ ಅಭಿಪ್ರಾಯಕ್ಕೆ ಯಾವ ಚಾಲೆಂಜ್ ಬೇಕಾದರೂ ಎದುರಿಸಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯಿಂದ ನಾನು ದೂರ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಬಳಿಕ ಕೆಲವೊಮ್ಮೆ ಸರ್ಕಾರಗಳನ್ನೇ ವಿಸರ್ಜನೆ ಮಾಡಿದ ಉದಾಹರಣೆ ಇದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ ಜತ್ತಿ, ರಾಮಕೃಷ್ಣ ಹೆಗಡೆ ಕಾಲದಲ್ಲೆಲ್ಲ ಇದು ನಡೆದಿದೆ. ಈಗಲೂ ಹಾಗೇ ಆಗೋದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ?. ಹೀಗಾಗಿ ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು. ಡಿ.ಕೆ. ಶಿವಕುಮಾರ್ ಹೇಳಿಕೆಗೆ ನಾನು ವಿರೋಧಿಸುವುದೂ ಇಲ್ಲ, ಸಹಮತವೂ ಇಲ್ಲ ಎಂದರು.
ಸಿ ಟಿ ರವಿ ವಿರುದ್ಧ ಗುಂಡೂರಾವ್ ವಾಗ್ದಾಳಿ : ರಾಜ್ಯದಲ್ಲಿ ಮೂವರು ಡಿಸಿಎಂ ಆಗಬೇಕೆಂಬ ಚರ್ಚೆ ದೊಡ್ಡ ವಿಚಾರವಲ್ಲ, ಪ್ರತಿಯೊಂದು ವಿಚಾರದ ಬಗ್ಗೆಯೂ ಅನಾವಶ್ಯಕವಾಗಿ ಮಾತನಾಡುವುದು ಮಾಜಿ ಶಾಸಕ ಸಿ ಟಿ ರವಿ ಅವರಿಗೆ ಒಂದು ಚಟ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.