ಬೆಂಗಳೂರು:ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಪಡೆದುಕೊಳ್ಳುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಫಲರಾಗಿದ್ದರೂ, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮತ್ತೊಮ್ಮೆ ಬರಿಗೈಲಿ ಬಂದಿದ್ದಾರೆ. ಹೋದ ಪುಟ್ಟ ಬಂದ ಪಟ್ಟ ಎನ್ನುವಂತೆ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಈ ಹಿಂದೆ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಅವರಿಗೆ ಎದುರಾದ ಸ್ಥಿತಿಯೇ ಈಗ ಬೊಮ್ಮಾಯಿಗೂ ಬಂದಿದೆ.
ರಾಜ್ಯದ ಯೋಜನೆಗಳ ವಿಚಾರದಲ್ಲಿ ಅಲ್ಪ ಸ್ವಲ್ಪ ಕೆಲಸ ಮಾಡಿಸಿಕೊಳ್ಳುವಲ್ಲಿ ಬೊಮ್ಮಾಯಿ ಸಕಾರಾತ್ಮಕವಾಗಿ ಮುಂದುವರೆದಿದ್ದರೂ ರಾಜಕೀಯ ವಿಚಾರದಲ್ಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾಗಿದೆ. ನಾಳೆ ಬಾ ಎನ್ನುವ ಮಾತಿನಂತೆ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡಿ ಯಾವುದೇ ತೀರ್ಮಾನ ಆಗದೆ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದಾರೆ.
ಬೊಮ್ಮಾಯಿ ಪ್ರವಾಸದಿಂದ ರಾಜ್ಯಕ್ಕೆ ಸಿಕ್ಕಿದ್ದು:ಈ ಬಾರಿಯ ದೆಹಲಿ ಪ್ರವಾಸದ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದ ಕೂಡಲೇ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಂದ ಭರವಸೆ ಪಡೆದುಕೊಳ್ಳಲಾಗಿದೆ.
ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಮೇಲ್ದಂಡೆ ಕುರಿತು ಕೇಂದ್ರ ಸಚಿವರ ಜೊತೆ ಚರ್ಚೆಯಾಗಿದೆ. ಈ ಯೋಜನೆಗಳ ಕುರಿತು ರಾಜ್ಯದ ನಿಲುವು ಹಾಗೂ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಅನುಮೋದಿಸುವುದು ಹಾಗೂ ಮಹದಾಯಿ ಯೋಜನೆಯ ಸಾಧ್ಯತಾ ವರದಿಗೆ ಒಪ್ಪಿಗೆ ನೀಡುವುದನ್ನು ಆದಷ್ಟು ಬೇಗನೆ ಮಾಡಲಾಗುವುದು ಎನ್ನುವ ಭರವಸೆ ಪಡೆದುಕೊಂಡಿದ್ದಾರೆ.
ಯು.ಕೆ.ಪಿ 3ನೇ ಹಂತದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಗೆ ಮನವಿ ಮಾಡಲಾಗಿದ್ದು, ನ್ಯಾಯಮೂರ್ತಿಗಳ ನೇಮಕಾತಿಯನ್ನೂ ಆದಷ್ಟು ಶೀಘ್ರವಾಗಿ ಮಾಡುವ ಕುರಿತು ಮಾತುಕತೆ ನಡೆಸಿಕೊಂಡು ಭರವಸೆಯೊಂದಿಗೆ ಸಿಎಂ ವಾಪಸ್ಸಾಗಲಿದ್ದಾರೆ.
ಜಿಎಸ್ಟಿ ವಿಚಾರ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದು, ಜಿಎಸ್ಟಿ ಪರಿಹಾರ ಕುರಿತು ಮಾತುಕತೆ ನಡೆಸಲಾಗಿದೆ. ಜೂನ್ನಿಂದ ಜಿಎಸ್ಟಿ ಪರಿಹಾರ ಹಂಚಿಕೆ ಸ್ಥಗಿತಗೊಳ್ಳುವ ಕಾರಣ ಇನ್ನಷ್ಟು ಸಮಯ ಜಿಎಸ್ಟಿ ಪರಿಹಾರ ಮುಂದುವರಿಕೆ ಕುರಿತು ಮಾತುಕತೆ ನಡೆದಿದ್ದು, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎನ್ನಲಾಗಿದೆ.