ಬೆಂಗಳೂರು: ಎರಡು ಉಪ ಚುನಾವಣೆ ಹಾಗೂ ವಿಧಾನ ಪರಿಷತ್ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗುತ್ತಿದ್ದರೆ, ಇನ್ನೊಂದೆಡೆ ಭಾರೀ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹಿನ್ನಡೆಯಾಗಿ ಮೌನಕ್ಕೆ ಜಾರಿವೆ.
ಬಿಜೆಪಿ ಮತ್ತು ಕಾಂಗ್ರೆಸ್ನ ಹಣಾಹಣಿ ಮಧ್ಯೆ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಿತ್ತಾದರೂ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಇದು ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿರುವ ಜೊತೆಗೆ ಜೆಡಿಎಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಸೋಲಿನಿಂದ ತಲೆಕೆಡಿಸಿಕೊಂಡಿರುವ ಜೆಡಿಎಸ್ ವರಿಷ್ಠರು ಸೋಲಿನ ಪರಾಮರ್ಶೆ ನಡೆಸಲು ಮುಂದಾಗಿದ್ದಾರೆ.
ಇನ್ನು ಹಳೇ ಮೈಸೂರು ಭಾಗದಲ್ಲೂ ಜೆಡಿಎಸ್ ದಿನೇ ದಿನೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಹಾಗೂ ಶಾಸಕರ ನಿದ್ದೆಗೆಡಿಸಿದೆ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ತಳಮಟ್ಟದಿಂದ ಪಕ್ಷ ಸಂಘಟನೆಗೆ ನಿರ್ಧರಿಸಿರುವ ಜೆಡಿಎಸ್ ವರಿಷ್ಠರು, ದೀಪಾವಳಿ ಹಬ್ಬ ಮುಗಿದ ನಂತರ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.
ಉಪ ಚುನಾವಣೆಗಳಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಎಂಬ ಸಂದೇಶ ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆಗಳಿಂದ ರವಾನೆಯಾಗಿದೆ. ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಚಿಂತನೆ ನಡೆಸುವಂತೆ ಮಾಡಿದ್ದು, ಕಾರ್ಯಕರ್ತರಲ್ಲೂ ಆತಂಕ ಎದುರಾಗಿದೆ. ಕೆಲ ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇತರ ಪಕ್ಷಗಳ ಕಡೆ ಮುಖ ಮಾಡಿದ್ದಾರೆ. ಹಾಗಾಗಿ ಪಕ್ಷ ದಿನದಿಂದ ದಿನಕ್ಕೆ ಕುಸಿಯುತ್ತಿರುವುದಕ್ಕೆ ಕಾರಣ ಹುಡುಕಲು ಹೊರಟಿರುವ ಜೆಡಿಎಸ್ ವರಿಷ್ಠರು, ಪಕ್ಷವನ್ನು ಭದ್ರಪಡಿಸಲು ತಂತ್ರಗಾರಿಗೆ ರೂಪಿಸುತ್ತಿದ್ದಾರೆ.
ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಲು ನಿರ್ಧರಿಸಿರುವ ವರಿಷ್ಠರು, ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸೋಲಿನ ಪರಾಮರ್ಶೆ:ಪಕ್ಷದ ಸೋಲಿಗೆ ಕಾರಣ ಕುರಿತು ಪಕ್ಷದ ವರಿಷ್ಠರು ಕಾರ್ಯಕರ್ತರಿಂದ ಮಾಹಿತಿ ಪಡೆಯಲಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸಲು ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.