ಕರ್ನಾಟಕ

karnataka

ETV Bharat / state

ಬಜೆಟ್​​ ಕುರಿತಾಗಿ ಸಿಎಂ ಯಡಿಯೂರಪ್ಪ ಹೊಸ ದಾಖಲೆ ಏನು?: ಸದಸ್ಯರ ನಿರಾಸಕ್ತಿಗೆ ಸ್ಪೀಕರ್ ಗರಂ - ಕಡಿಮೆ ಅವಧಿಯಲ್ಲಿ ಬಜೆಟ್ ಓದಿ ಮುಗಿಸಿದ ಸಿಎಂ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್ ಅನ್ನು ಅತಿ ಕಡಿಮೆ ಕಾಲಾವಕಾಶದಲ್ಲಿ ಓದುವ ಮೂಲಕ ಹೊಸ ದಾಖಲೆ ಬರೆದರು.

ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

By

Published : Mar 5, 2020, 8:08 PM IST

ಬೆಂಗಳೂರು :ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಅತಿ ಕಡಿಮೆ ಅವಧಿಯಲ್ಲಿ ಇಂದು ಬಜೆಟ್ ಓದಿ ಮುಗಿಸಿದ್ದಾರೆ.

ಒಟ್ಟು 104 ಪುಟಗಳ ಬಜೆಟ್ ಹೊತ್ತಿಗೆ ಓದಲು ಸಿಎಂ 1 ಗಂಟೆ 45 ನಿಮಿಷಗಳ ಕಾಲಾವಧಿ ತೆಗೆದುಕೊಂಡರು. ಈ ಮೂಲಕ ರಾಜ್ಯದ ಬಜೆಟ್ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಪ್ರತಿ ಓದಿದ ಸಿಎಂ ಎಂಬ ದಾಖಲೆಗೆ ಬಿಎಸ್​​ವೈ ಪಾತ್ರರಾಗಿದ್ದಾರೆ.

ಬಜೆಟ್ ಪ್ರತಿ ಓದಲು ಬೆಳಿಗ್ಗೆ 11ಕ್ಕೆ ಆರಂಭಿಸಿದ ಬಿಎಸ್​ವೈ ಮಧ್ಯಾಹ್ನ 12.45ಕ್ಕೆ ಮುಗಿಸಿದರು. 2019ರ ಫೆಬ್ರವರಿ 8ಕ್ಕೆ ಹೆಚ್.ಡಿ ಕುಮಾರಸ್ವಾಮಿ 3 ಗಂಟೆ 10 ನಿಮಿಷಗಳ ಕಾಲ ಬಜೆಟ್ ಓದಲು ಸಮಯ ತೆಗೆದುಕೊಂಡಿದ್ದರು. ಮಧ್ಯಾಹ್ನ 12.35ಕ್ಕೆ ಕುಮಾರಸ್ವಾಮಿ ಬಜೆಟ್ ಭಾಷಣ ಆರಂಭಿಸಿ 3.40ಕ್ಕೆ ತಮ್ಮ ಭಾಷಣ ಪೂರ್ಣಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಎಸ್​ವೈ ಬಳಿ ಧಾವಿಸಿದ ಆಡಳಿತ ಪಕ್ಷದ ಶಾಸಕರು ಅಭಿನಂದಿಸಿದ್ದರು.

ಸದನದಲ್ಲಿ ಸಿಎಂ ಬಜೆಟ್​​ ಮಂಡನೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2018, ಫೆಬ್ರವರಿ 16ರಂದು 4 ಗಂಟೆ 10 ನಿಮಿಷ ಬಜೆಟ್ ಓದಲು ಸಮಯ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2,09,181 ಲಕ್ಷದ ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದ್ದರು.

ಇಂದು ಬಿಎಸ್​ವೈ ಬಜೆಟ್ ಓದುತ್ತಿದ್ದ ವೇಳೆ ಒಂದೆರಡು ಬಾರಿಯಷ್ಟೇ ನೀರು ಕುಡಿದರು. ಆಗೊಮ್ಮೆ ಈಗೊಮ್ಮೆ ಕರ್ಚಿಫ್​ನಲ್ಲಿ ಮುಖ ಒರೆಸಿಕೊಳ್ಳುತ್ತಿದ್ದರು. ಒಮ್ಮೆಮ್ಮೆ ಏರುಧ್ವನಿಯಲ್ಲಿ ಬಜೆಟ್ ಪ್ರತಿ ಓದಿದರೆ, ಕೆಲವೊಮ್ಮೆ ಧ್ವನಿ ಕಡಿಮೆಯಾಗುತ್ತಿತ್ತು. ಆದರೂ, ನಿಂತುಕೊಂಡೇ ಪೂರ್ಣ ಬಜೆಟ್ ಪ್ರತಿ ಓದಿ ಮುಗಿಸಿದರು.

ಸದನ ಸದಸ್ಯರಲ್ಲಿ ನಿರಾಸೆ :

ಒಂದೆಡೆ ಸಿಎಂ ಯಡಿಯೂರಪ್ಪ ಬಜೆಟ್ ಪ್ರತಿ ಓದುತ್ತಿದ್ದರೆ, ಆಡಳಿತ ಹಾಗೂ ಪ್ರತಿ ಪಕ್ಷದ ಸದಸ್ಯರ ನಡುವೆ ನಿರಾಸೆ ಎದ್ದುಕಾಣುತ್ತಿತ್ತು. ಎರಡೂ ಕಡೆ ಕೆಲ ಸದಸ್ಯರು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಇನ್ನು ಕೆಲ ಸದಸ್ಯರು ಸದನದಿಂದ ಹೊರ ಹೋಗುವುದು, ಬರುವುದು ಮಾಡುತ್ತಿದ್ದರು.

ಸದಸ್ಯರ ನಿರಾಸಕ್ತಿಗೆ ಸ್ಪೀಕರ್ ಗರಂ:

ಸದನದಲ್ಲಿ ಎರಡೂ ಕಡೆಯ ಕೆಲ ಶಾಸಕರು ಮಾತುಕತೆಯಲ್ಲಿ ತೊಡಗಿದ್ದಾಗ ಗರಂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಮ್ಮ ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಖಾರವಾಗಿ ಸೂಚಿಸಿದರು. ಆದರೂ, ಸದಸ್ಯರು ಮಾತ್ರ ತಮ್ಮ ಗುಸು ಗುಸು ಮಾತುಗಳನ್ನು ಮುಂದುವರಿಸಿದ್ದರು. ಮಗಳ ಮದುವೆ ಸಮಾರಂಭ ಇದ್ದ ಕಾರಣ ಸಚಿವ ಶ್ರೀರಾಮುಲು ಸದನದಲ್ಲಿ ಹಾಜರಿರಲಿಲ್ಲ. ಇನ್ನು ಹೊನ್ನಾಳಿಯಲ್ಲಿ ಕೃಷಿ ಮೇಳ ಕಾರ್ಯಕ್ರಮ ಪ್ರಯುಕ್ತ ಶಾಸಕ ಎಂ.ಪಿ.ರೇಣುಕಾಚಾರ್ಯ ಗೈರಾಗಿದ್ದರು.

ಮಾಜಿ ಸಿಎಂ ಗೈರು:

ಜೆಡಿಎಸ್ ಪಕ್ಷದ ಎಲ್ಲ ಶಾಸಕರು ಸದನದಲ್ಲಿ ಹಾಜರಿದ್ದರು. ಆದರೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದನಕ್ಕೆ ಗೈರಾಗಿದ್ದರು.

ತಂದೆ ಮಂಡಿಸಿದ ಬಜೆಟ್ ವೀಕ್ಷಿಸಿದ ಮಗ, ಮಗಳು, ಮೊಮ್ಮಗಳು

ತಂದೆ ಮಂಡಿಸಿದ ಬಜೆಟ್ ವೀಕ್ಷಿಸಿದ ಮಗ, ಮಗಳು, ಮೊಮ್ಮಗಳು :

ಸದನದಲ್ಲಿ ತದೇಕಚಿತ್ತದಿಂದ ಸಿಎಂ ಮಂಡಿಸುತ್ತಿದ್ದ ಬಜೆಟ್ ಅನ್ನು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಬಿ.ವೈ.ವಿಜಯೇಂದ್ರ, ಬಿಎಸ್​ವೈ ಅವರ ಪುತ್ರಿ, ಮೊಮ್ಮಗಳು ವೀಕ್ಷಿಸಿದ್ದು ವಿಶೇಷವಾಗಿತ್ತು.

ABOUT THE AUTHOR

...view details