ಕರ್ನಾಟಕ

karnataka

ETV Bharat / state

ಅತೃಪ್ತರ ಹಿಂದೆ ಕೆಲಸ ಮಾಡುತ್ತಿರುವ ಆ ಶಕ್ತಿ ಯಾವುದು...! - kannada newspaper, etvbharat, ಅತೃಪ್ತರು, ಶಕ್ತಿ, ಬೆಂಗಳೂರು,  ಸಿಎಂ, ಅತೃಪ್ತ ಶಾಸಕರು, ವಿಫಲ, ಮೈತ್ರಿ ಸರ್ಕಾರ, ಲೋಕಸಭೆ ಚುನಾವಣೆ, ಮಾಜಿ ಸಿಎಂ ಸಿದ್ದರಾಮಯ್ಯ, ದೆಹಲಿಯ ಹೈಕಮಾಂಡ್ ತಂಡ, ಗುಲಾಮ್‍ ನಬಿ ಆಜಾದ್,  ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಾ.ಜಿ. ಪರಮೇಶ್ವರ್,

ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ನಿನ್ನೆ ಇಡೀ ದಿನ ಸಿಎಂ ಹಾಗೂ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಅತೃಪ್ತ ಶಾಸಕರ ಮನಸ್ಸು ಬದಲಿಸುವ ಪ್ರಯತ್ನ ಮಾಡಿದ್ದು ಅದರಲ್ಲಿ ವಿಫಲರಾಗಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗದ ಶಾಸಕರ ಹಿಂದಿರುವ ಶಕ್ತಿಯಾದರೂ ಯಾವುದು ಎಂಬ ಪ್ರಶ್ನೆ ಮೂಡಿದೆ. ಸದ್ಯ ಎಲ್ಲರ ಚಿತ್ತ ಇಂದಿನ ಅಧಿವೇಶನದತ್ತ ನೆಟ್ಟಿದೆ.

ಅತೃಪ್ತರ ಹಿಂದೆ ಕೆಲಸ ಮಾಡುತ್ತಿರುವ ಆ ಶಕ್ತಿ ಯಾವುದು......!

By

Published : Jul 15, 2019, 12:27 PM IST

ಬೆಂಗಳೂರು: ನಿನ್ನೆ ಇಡೀ ದಿನ ಸಿಎಂ ಹಾಗೂ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಅತೃಪ್ತ ಶಾಸಕರ ಮನಸ್ಸು ಬದಲಿಸುವ ಪ್ರಯತ್ನ ಮಾಡಿದ್ದು ಅದರಲ್ಲಿ ವಿಫಲರಾಗಿದ್ದಾರೆ. ಎಷ್ಟೇ ತಂತ್ರ ಬಳಸಿದರೂ ಅತೃಪ್ತರು ಜಗ್ಗದಿರುವುದರ ಹಿಂದೆ ದೊಡ್ಡ ಶಕ್ತಿಯೊಂದು ಕೆಲಸ ಮಾಡುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ.

ಕಾಂಗ್ರೆಸ್ ಮಟ್ಟಿಗೆ ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್ ಮತ್ತಿತರರು ಸರ್ಕಾರದ ಪರವಾಗಿ ನಿಂತು ಸಂಧಾನ ನಡೆಸುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್‍ನ ಅತ್ಯಂತ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರೂ ಕೂಡ ಅಖಾಡಕ್ಕಿಳಿದಿದ್ದಾರೆ. ಅಲ್ಲದೆ, ದೆಹಲಿಯ ಹೈಕಮಾಂಡ್ ತಂಡದಲ್ಲಿರುವ ಗುಲಾಮ್‍ ನಬಿ ಆಜಾದ್, ಕೆ.ಸಿ.ವೇಣುಗೋಪಾಲ್ ಅವರು ಬಂದು ಬೆಂಗಳೂರಿನಲ್ಲಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ಪ್ರಕ್ರಿಯೆ ನಡೆಸಿದ್ದಾರೆ.

ಆದರೆ ಇದ್ಯಾವುದಕ್ಕೂ ಅತೃಪ್ತರು ಮಾತ್ರ ಬಗ್ಗಿಲ್ಲ. ಏಕಾಏಕಿ ಈ ಎಲ್ಲಾ ಶಾಸಕರಿಗೆ ಈ ಮಟ್ಟಿನ ಧೈರ್ಯ, ಆತ್ಮವಿಶ್ವಾಸ ಬಂದಿದ್ದದಾದರೂ ಎಲ್ಲಿಂದ ಎಂಬ ಪ್ರಶ್ನೆ ಎದ್ದಿದೆ.

ನಿನ್ನೆ ಇಡೀ ದಿನ ನಡೆದ ಸಂಧಾನ ಸಭೆಯ ನಂತರವೂ ಎಂ.ಟಿ.ಬಿ.ನಾಗರಾಜ್ ಕಾಂಗ್ರೆಸ್ ನಾಯಕರ ಮಾತಿಗೆ ಸೊಪ್ಪು ಹಾಕದೆ ಮುಂಬೈಗೆ ಹಾರಿರುವುದು ನೋಡಿದರೆ ಈ ರಾಜಕೀಯ ಹಿಂದೆ ಬಿಜೆಪಿ ನಾಯಕರಿದ್ದಾರೋ ? ಅಥವಾ ಕಾಂಗ್ರೆಸ್ಸಿಗರೇ ಮಾರ್ಗದರ್ಶನ ಮಾಡುತ್ತಿದ್ದಾರೋ ? ಎಂಬ ಗೊಂದಲಗಳು ನಿರ್ಮಾಣವಾಗಿದೆ. ಅತೃಪ್ತರು ಯಾರು ತಾವೇಕೆ ರಾಜೀನಾಮೆ ನೀಡಿದರು, ತಮ್ಮ ನಿಜವಾದ ಬೇಡಿಕೆಗಳೇನು ಎಂಬುದನ್ನು ಯಾರೊಬ್ಬರು ಬಹಿರಂಗಪಡಿಸಿಲ್ಲ.

ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆ ನಂತರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಧರ್ಮಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್‍ನ ಬಹಳಷ್ಟು ಶಾಸಕರು ಸಿದ್ದರಾಮಯ್ಯನವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದರು. ಅಲ್ಲಲ್ಲಿ ಕೆಲವು ನಾಯಕರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಚುನಾವಣೆ ಮೈತ್ರಿ ಸರ್ಕಾರದ ಪತನಕ್ಕೆ ಕಿಡಿ ಹೊತ್ತಿಸಿತ್ತು.

ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಅವರ ನಡುವಿನ ವೈಯಕ್ತಿಕ ಸಂಘರ್ಷ ರಾಜಕೀಯಕ್ಕೆ ತಳಕು ಹಾಕಿಕೊಂಡಿತ್ತು. ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬ್ಯಾಂಕ್‍ನ ಚುನಾವಣೆಯಲ್ಲಿ ಕಿಡಿಕಾರಿದಾಗ ರಮೇಶ್ ಜಾರಕಿಹೊಳಿ ಮಧ್ಯಪ್ರವೇಶಿಸಿದ್ದರು. ಅಲ್ಲಿಂದ ರಾಜಕಾರಣ ದಿನೇ ದಿನೇ ಸಂಘರ್ಷದಲ್ಲೇ ಮುಂದುವರೆದಿತ್ತು.

ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕರು ರಮೇಶ್ ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡಿದರು. ಈ ಸೇಡಿಗಾಗಿ ಸರ್ಕಾರವನ್ನು ಪತನಗೊಳಿಸಲು ರಮೇಶ್ ಜಾರಕಿಹೊಳಿ ಪಣತೊಟ್ಟು ನಿರಂತರ ಪ್ರಯತ್ನ ನಡೆಸಿದರು. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್. ವಿಶ್ವನಾಥ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟಿತ್ತು. ಜೊತೆಗೆ ಜೆಡಿಎಸ್‍ನಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಅಸಹಾಯಕತೆಯೂ ಇತ್ತು. ಹಾಗಾಗಿ ಅವರು ಅತೃಪ್ತ ಬಣದ ನೇತೃತ್ವ ವಹಿಸಿದರು.

ಆದರೆ, ಆನಂದ್‍ಸಿಂಗ್, ರಾಮಲಿಂಗಾರೆಡ್ಡಿ, ರೋಷನ್‍ಬೇಗ್ ಅವರ ಬೇಡಿಕೆಗಳು ಮತ್ತು ನಿಲುವುಗಳು ಪ್ರತ್ಯೇಕವಾಗಿವೆ. ಇನ್ನು ಮಹೇಶ್ ಕುಮಟಳ್ಳಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್ ಅವರ ರಾಜಕೀಯವೇ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಗಳಾಗಿದ್ದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ಡಾ. ಸುಧಾಕರ್ ಅವರುಗಳು ಅತೃಪ್ತ ಗುಂಪಿನಲ್ಲಿದ್ದು, ಯಾರ ಮಾತಿಗೂ ಮನ್ನಣೆ ನೀಡದಿರುವುದು ಉಭಯ ನಾಯಕರ ನಿದ್ದೆಗೆಡಿಸಿದೆ.

ಔಪಚಾರಿಕವಾಗಿ ಕೆಲವರು ತಮ್ಮ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ ಎಂದರೆ, ಇನ್ನು ಕೆಲವರು ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಹೊರಹಾಕಿದ್ದಾರೆ. ಅತೃಪ್ತರ ಜೊತೆ ಬಿಜೆಪಿ ಉನ್ನತ ನಾಯಕರು ನೇರ ಸಂಪರ್ಕದಲ್ಲಿದ್ದಾರೋ, ಕಾಂಗ್ರೆಸ್ಸಿಗರೇ ಮಾರ್ಗದರ್ಶನ ಮಾಡುತ್ತಿದ್ದಾರೋ ಅಥವಾ ಅವರ ಬೇಡಿಕೆಗಳೇನು, ಇವರ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂಬುದು ಮಾತ್ರ ನಿಗೂಢವಾಗಿದೆ. ಸದ್ಯ ಎಲ್ಲರ ಚಿತ್ತ ಇಂದಿನ ಅಧಿವೇಶನದತ್ತ ನೆಟ್ಟಿದೆ.

For All Latest Updates

TAGGED:

ABOUT THE AUTHOR

...view details