ಬೆಂಗಳೂರು: ಸಂಪುಟ ವಿಸ್ತರಣೆಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಂತೆ ರಾಜ್ಯದಲ್ಲಿ ದಿಢೀರ್ ನಾಯಕತ್ವ ಬದಲಾವಣೆಯ ವದಂತಿ ಹರಡಿದೆ. ಅಸಲಿಗೆ ದೆಹಲಿಯಲ್ಲಿ ನಡೆದಿದ್ದೇನು? ನಾಯಕತ್ವ ಬದಲಾವಣೆ ಕೂಗು ಕೇಳುವಂತೆ ಮಾಡಿದ್ದು ಯಾರು? ಎನ್ನುವ ಕುರಿತ ವರದಿ ಇಲ್ಲಿದೆ.
ಕಲಬುರಗಿಯಿಂದ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳುತ್ತಿದ್ದಂತೆ ರಾಜ್ಯದಲ್ಲಿ ದಿಢೀರ್ ನಾಯಕತ್ವ ಬದಲಾವಣೆಯ ವದಂತಿ ಹರಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ರೆಕ್ಕೆಪುಕ್ಕ ಬೆಳೆದುಕೊಂಡಿದ್ದವು. ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗುತ್ತದೆ. ಮತ್ತೊಬ್ಬ ಲಿಂಗಾಯಿತರಿಗೆ ಅವಕಾಶ ಕೊಡಲಾಗುತ್ತದೆ. ಅದಕ್ಕೆ ಬದಲಾಗಿ ಯಡಿಯೂರಪ್ಪ ಪುತ್ರ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಆಡಳಿತದಲ್ಲಿ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಕೆಲವು ಪ್ರಭಾವಿ ನಾಯಕರು ಕೇಂದ್ರಕ್ಕೆ ದೂರು ನೀಡಿದ್ದಾರೆ ಎನ್ನುವ ಮಾತುಗಳು ವದಂತಿಯ ವರದಿಯಲ್ಲಿ ಕೇಳಿ ಬಂದಿವೆ.
ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾಗಿದೆ, ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕ ಭಾಗದ ಶಾಸಕರೊಬ್ಬರು ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಲಿದ್ದಾರೆ, ಅವರು ಆರ್ಎಸ್ಎಸ್ ಹಿನ್ನೆಲೆಯನ್ನೂ ಹೊಂದಿರಲಿದ್ದಾರೆ ಎನ್ನುವ ಸುದ್ದಿಯನ್ನು ಹರಿದುಬಿಡಲಾಗಿತ್ತು. ಆದರೆ, ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಬೇರೆ ಎನ್ನುತ್ತಿವೆ ಸಿಎಂ ಆಪ್ತ ಮೂಲಗಳು.
ಬಿಎಸ್ವೈ ಆಡಳಿತ ನಿರ್ವಹಣೆಗೆ ನಮೋ ಮೆಚ್ಚುಗೆ!
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಯಸ್ಸಿನ ಸಮಸ್ಯೆಯಲ್ಲಿಯೂ ದಕ್ಷತೆಯಿಂದ ಚುರುಕಿನ ಆಡಳಿತ ನೀಡುತ್ತಿರುವುದಕ್ಕೆ, ಕೊರೊನಾ ನಿರ್ವಹಣೆಗೆ ಶಹಬ್ಬಾಶ್ ಗಿರಿ ನೀಡಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುಮತಿ, ಅನುದಾನದ ಬೇಡಿಕೆಯಿರಿಸಿ ಸವಿಸ್ತಾರವಾದ ಚರ್ಚೆ ನಡೆಸಿದ್ದು, ನಾಯಕತ್ವ ಬದಲಾವಣೆಯಂತಹ ಸನ್ನಿವೇಶ ಇಲ್ಲ ಎನ್ನುವುದಕ್ಕೆ ನಿದರ್ಶನದಂತೆ ಕಂಡು ಬಂದಿದೆ.