ಬೆಂಗಳೂರು: ಈಗೇನಿದ್ದರೂ ಕಮಿಷನ್ನದ್ದೇ ಸದ್ದುಗದ್ದಲ. ಗುತ್ತಿಗೆದಾರರ ಶೇ40 ಕಮಿಷನ್ ಮಸಿ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಷ್ಟಕ್ಕೂ ಪ್ರಮುಖ ಇಲಾಖೆಗಳ ಬಾಕಿ ಬಿಲ್ಗಳ ಸದ್ಯದ ಸ್ಥಿತಿಗತಿ ಹೇಗಿದೆ ನೋಡೋಣ.
ಕಮಿಷನ್...ಕಮಿಷನ್...ಕಮಿಷನ್...ಗುತ್ತಿಗೆದಾರರಿಂದ ಹಿಡಿದು ಪ್ರತಿಪಕ್ಷಗಳು ಸೇರಿ ಮಠಾಧಿಪತಿಗಳವರೆಗೆ ದಿನನಿತ್ಯ ಭಾರಿ ಸದ್ದು ಮಾಡುತ್ತಿರುವ ಗಂಭೀರ ಆರೋಪ. ಕಮಿಷನ್ ಮಸಿಗೆ ಬಿಜೆಪಿ ಸರ್ಕಾರದ ಪ್ರಮುಖ ಸಚಿವರೇ ಅಧಿಕಾರ ಕಳೆದುಕೊಳ್ಳಬೇಕಾಯಿತು. ಬರಿದಾದ ಬೊಕ್ಕಸದಿಂದ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಕಷ್ಟಸಾಧ್ಯವಾಗುತ್ತಿದ್ದು, ಬಾಕಿ ಬಿಲ್ ಬೆಟ್ಟದಷ್ಟು ಬೆಳೆದಿದೆ. ಅನುದಾನದ ಕೊರತೆ ಹಿನ್ನೆಲೆಯಲ್ಲಿ ಬಿಲ್ ಪಾವತಿಸಲು ಸರ್ಕಾರ 40%ವರೆಗೆ ಕಮಿಷನ್ಗೆ ಕೈವೊಡ್ಡುತ್ತಿದೆ ಎಂಬ ಆರೋಪವನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಅದರಲ್ಲೂ ಪಂಚಾಯತ್‌ರಾಜ್ ಇಲಾಖೆ, ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಬಾಕಿ ಬಿಲ್ ಬೆಳೆದು ನಿಂತಿದೆ. ಈ ಪ್ರಮುಖ ಮೂರು ಇಲಾಖೆಗಳ ಮೇಲೆ ಈ ಕಮಿಷನ್ ಆರೋಪ ಕೇಳಿ ಬಂದಿದ್ದು, ಸದ್ಯ ಈ ಮೂರು ಇಲಾಖೆಗಳ ಬಾಕಿ ಬಿಲ್ ಸ್ಥಿತಿಗತಿ ಹೀಗಿದೆ..
ಪಿಡಬ್ಲ್ಯುಡಿ ಮೇಲೆ 4,000 ಕೋಟಿ ಬಾಕಿ ಬಿಲ್ ಹೊರೆ:ಲೋಕೋಪಯೋಗಿ ಇಲಾಖೆ ಮೇಲೆ ಬಾಕಿ ಬಿಲ್ ಹೊರೆ ತೀವ್ರವಾಗಿ ಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಮೇಲೂ ಕಮಿಷನ್ ಮಸಿ ಅಂಟಿದೆ. ಬಾಕಿ ಬಿಲ್ ಪಾವತಿ ಮಾಡದೇ ಕಾಮಗಾರಿಗಳ ಪೂರ್ಣ ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತ ಬೆಟ್ಟದಷ್ಟು ಬೆಳೆಯುತ್ತಲೇ ಇದೆ.
ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಈ ಬಗ್ಗೆ ಒಪ್ಪಿಕೊಂಡಿದ್ದು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ಸಚಿವ ಮಹದೇವಪ್ಪರ ಕಾಲದಿಂದ ಬಾಕಿ ಬಿಲ್ ಹೊರೆ ಇಮ್ಮಡಿಯಾಗುತ್ತಲೇ ಇದೆ ಎಂದು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಇಲಾಖೆಯಲ್ಲಿ ಪ್ರಸ್ತುತ 4,000 ಕೋಟಿ ರೂ. ಬಾಕಿ ಬಿಲ್ ಇದೆ. ಸುಮಾರು 11,200 ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಹಾಜರಾತಿ ಆಧರಿಸಿ ವೇತನ ಪಾವತಿ ವ್ಯವಸ್ಥೆ ಜಾರಿ: ಸಚಿವ ಡಾ.ಸುಧಾಕರ್
ಈವರೆಗೆ ಬಾಕಿ ಬಿಲ್ಗಾಗಿ 5,252 ಕೋಟಿ:ಈವರೆಗೆ ಲೋಕೋಪಯೋಗಿ ಇಲಾಖೆ ಬಾಕಿ ಬಿಲ್ ಪಾವತಿಗಾಗಿ ಒಟ್ಟು 5,252 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕಾಮಗಾರಿಗೆ 1,340 ಕೋಟಿ ರೂ., ಜಿಲ್ಲಾ ಪ್ರಮುಖ ರಸ್ತೆ ಕಾಮಗಾರಿಗಳಿಗಾಗಿನ ಬಾಕಿ ಬಿಲ್ ಪಾವತಿಸಲು 2,657 ಕೋಟಿ ರೂ., ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ರಸ್ತೆ ಕಾಮಗಾರಿಗಳ ಬಾಕಿ ಬಿಲ್ ಗಾಗಿ 440 ಕೋಟಿ ರೂ. ಹಾಗೂ ಕೆ-ಶಿಪ್ ಕಾಮಗಾರಿಗಳ ಬಾಕಿ ಬಿಲ್ ಗಾಗಿ 815 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.