ಬೆಂಗಳೂರು:''ಮೇಕೆದಾಟು ಯೋಜನೆ ವಿಚಾರದಲ್ಲಿ ಹಿಂದೆ ಆರ್ಭಟ ಮಾಡಿದ್ದ ಮತ್ತು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್ ಮತ್ತು ಇತರ ಮುಖಂಡರು ಈಗ ಆ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು'' ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ''ಮೇಕೆದಾಟು ಸಂಬಂಧ ತಮಿಳುನಾಡಿನ ಸಚಿವ ದೊರೆಮುರುಗನ್ ಅವರು ಆಕ್ರಮಣಕಾರಿ ವರ್ತನೆ ಕೈಬಿಡಿ ಎಂದಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಹೋರಾಟ ಮಾಡಿದ್ದ ಕಾಂಗ್ರೆಸ್ಸಿಗರು ಈಗ ತಮ್ಮ ನಿಲುವನ್ನು ತಿಳಿಸಲಿ'' ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ವಿರುದ್ಧ ಗರಂ:''ನಿಮ್ಮ ಪಕ್ಷದ ಬೆಂಬಲದ ಸರಕಾರ ತಮಿಳುನಾಡಿನಲ್ಲಿದೆ. ಈಗ ನೀವು ಏನು ಉತ್ತರ ಕೊಡುತ್ತೀರಿ? ಏನು ಕ್ರಮ ಕೈಗೊಳ್ಳುತ್ತೀರಿ? ಈಗ ನೀವು ಉತ್ತರದಾಯಿತ್ವ ಪ್ರದರ್ಶಿಸಬೇಕಿದೆ ಎಂದು ತಿಳಿಸಿದರು. ಹಿಂದೆ ನೀವು ನಮ್ಮ ಮೇಲೆ ಇದನ್ನು ಚುನಾವಣೆ ಟೂಲ್ ಕಿಟ್ ಆಗಿ ಬಳಸಿದ್ದೀರಿ ಎಂದು ಆರೋಪಿಸಿದರು. ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ನಿಂತು ಭಾರತದ ಅಪಮಾನ ಮಾಡಿದ್ದನ್ನು ಮತ್ತೆ ಖಂಡಿಸಿದ ಅವರು, ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಸೇರಿ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂಬ ಕರೆಯ ಕುರಿತು ಮಾತನಾಡಿದರು. ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಯಾಕೆ ಸೇರಬೇಕು? ಬಿಜೆಪಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್ ದುರಾಡಳಿತ, ದುರ್ನಡತೆ ವಿರುದ್ಧ ಜನ್ಮ ತಾಳಿವೆ'' ಎಂದು ನೆನಪಿಸಿದರು.