ಕರ್ನಾಟಕ

karnataka

ETV Bharat / state

ಸರ್ಕಾರದ ಕೃಷಿ ಯೋಜನೆಗಳು ಯಾವುವು? ಇದರಿಂದ ಲಾಭ ಪಡೆದವರೆಷ್ಟು ಮಂದಿ? ಸಂಪೂರ್ಣ ಮಾಹಿತಿ.. - Kisan Samman Nidhi

ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಯಾವುವು? ಇದರಿಂದ ರೈತರಿಗೆ ಎಷ್ಟು ನೆರವು ದೊರೆತಿದೆ. ರೈತರು ಪ್ರಮುಖ ಕೃಷಿ ಯೋಜನೆಗಳ ಲಾಭ ಪಡೆಯುವುದು ಹೇಗೆ ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Agricultural Schemes
ಸರ್ಕಾರದ ಕೃಷಿ ಯೋಜನೆಗಳು ಯಾವುವು

By

Published : Aug 4, 2021, 7:15 AM IST

ಬೆಂಗಳೂರು: ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರಗೊಳಿಸುವುದರ ಜೊತೆಗೆ ಆರ್ಥಿಕವಾಗಿ ಲಾಭದಾಯಕ ಉದ್ಯೋಗವನ್ನಾಗಿ ಮಾಡುವುದು ಸರ್ಕಾರದ ಉದ್ದೇಶ. ಹಾಗಾಗಿ, ರೈತರ ನೆರವಿಗೆ ಧಾವಿಸಿರುವ ಸರ್ಕಾರ, 17 ಉತ್ತೇಜನ ಯೋಜನೆಗಳನ್ನು ಒದಗಿಸುತ್ತಿದೆ.

ರಾಜ್ಯದಲ್ಲಿ ಹಿಂದುಳಿದ ಪ್ರದೇಶ ಹಾಗೂ ಸಣ್ಣ ರೈತರಿಗೆ ವಿಶೇಷ ಗಮನ ನೀಡಲಾಗುತ್ತಿದ್ದು, ವಾರ್ಷಿಕ ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಶೇ.4.5 ಪ್ರಮಾಣ ಹೆಚ್ಚಿಸುವ ಗುರಿ ಇದೆ. ಆ ಮೂಲಕ ಕೃಷಿ ಕಾರ್ಯಕ್ಕೆ ನೆರವಾಗಲು ಕೃಷಿ ಅಭಿವೃದ್ಧಿ ಮತ್ತು ನೆರವು ಯೋಜನೆಗಳು ಉತ್ತೇಜನ ನೀಡುತ್ತಿವೆ.

ಸಣ್ಣ, ಮಧ್ಯಮ ಹಾಗೂ ಮಹಿಳಾ ರೈತರ ಜೀವನ ಮಟ್ಟ ಹಾಗೂ ಆದಾಯವನ್ನು ಹೆಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 17 ಯೋಜನೆಗಳನ್ನು ಜಾರಿಗೊಳಿಸಿವೆ.

  • 2019-20ನೇ ಸಾಲಿನಲ್ಲಿ 113.67 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿಗೆ 103.97 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.
  • 2019-20ನೇ ಸಾಲಿನಲ್ಲಿ ಆಹಾರ ಧಾನ್ಯಗಳ 138.67 ಲಕ್ಷ ಟನ್ ಉತ್ಪಾದನಾ ಗುರಿಗೆ 136.41 ಲಕ್ಷ ಟನ್ ಉತ್ಪಾದನೆಯಾಗಿದೆ.
  • 2020-21ನೇ ಸಾಲಿನಲ್ಲಿ 110.00 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿಗೆ 111.41 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.
  • 2020-21ನೇ ಸಾಲಿನಲ್ಲಿ 133.04 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನಾ ಗುರಿಗೆ 158.73 ಲಕ್ಷ ಟನ್ ದಾಖಲೆ ಪ್ರಮಾಣದಲ್ಲಿ ಹೆಚ್ಚಿನ ಉತ್ಪಾದನೆಯಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ರಾಜ್ಯ ಸರ್ಕಾರ) :

  • 2019-20ನೇ ಸಾಲಿನಲ್ಲಿ 45,28,735 ರೈತರಿಗೆ 905.74 ಕೋಟಿ ರೂಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
  • 2020-21ನೇ ಸಾಲಿನಲ್ಲಿ 49,18,986 ರೈತರಿಗೆ 983.71 ಕೋಟಿ ರೂಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
  • 2021-22ನೇ ಸಾಲಿನಲ್ಲಿ ಈವರೆಗೆ 47,98,095 ರೈತರಿಗೆ 959.61 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಕೇಂದ್ರ ಸರ್ಕಾರ) :

  • 2019-20ನೇ ಸಾಲಿನಲ್ಲಿ 51,10,002 ರೈತರಿಗೆ 2,789.67 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
  • 2020-21ನೇ ಸಾಲಿನಲ್ಲಿ 53,16,278 ರೈತರಿಗೆ 3,157.73 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
  • 2021-22ನೇ ಸಾಲಿನಲ್ಲಿ ಈವರೆಗೆ 53,28,759 ರೈತರಿಗೆ 10,065.75 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ :

  • 2019-20 ನೇ ಸಾಲಿನಲ್ಲಿ 6.34 ಲಕ್ಷ ರೈತರಿಗೆ 729.63 ಕೋಟಿ ರೂ.
  • 2020-21 ಸಾಲಿನಲ್ಲಿ 61,244 ರೈತರಿಗೆ 47.15 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ.
  • ಉಳಿದ 2,85,8,106 ರೈತರಿಗೆ 419.47 ಕೋಟಿ ರೂ.ಗಳ ಮೊತ್ತವನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಕೃಷಿ ಯಾಂತ್ರೀಕರಣ : ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ಬಿತ್ತನೆ ಉಪಕರಣ, ಟ್ರ್ಯಾಕ್ಟರ್, ಅಂತರ ಬೇಸಾಯ, ತ್ಯಾಜ್ಯ ವಸ್ತುಗಳ ನಿರ್ವಹಣೆ, ಕೊಯಿಲು ಮತ್ತು ಒಕ್ಕಣಿ ಮಾಡುವ ಉಪಕರಣಗಳು ಹಾಗೂ ಡೀಸೆಲ್ ಪಂಪ್‌ಸೆಟ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ಸಹಾಯಧನ (ಒಬ್ಬ ರೈತನಿಗೆ ಸಾಮಾನ್ಯ ವರ್ಗ ಶೇ.50, ಎಸ್‌ಸಿ-ಎಸ್‌ಟಿ ರೈತರಿಗೆ ಶೇ.90 (ಮಿತಿ 1 ಲಕ್ಷ ರೂ.) ನೀಡಲಾಗುತ್ತದೆ.

ಯಂತ್ರೋಪಕರಣ 5 ಲಕ್ಷದೊಳಗಿದ್ದಲ್ಲಿ ಕಾನೂನಿನ್ವಯ ನೋಂದಾಯಿತ ರೈತ ಗುಂಪುಗಳಿಗೆ ನೀಡುವುದು. ರೈತರ ಗುಂಪು ರಚನೆಯಾಗಿ 6 ತಿಂಗಳಾಗಿದ್ದು, ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿ ಮಾಡಿಸಿರಬೇಕು. ರೈತರ ಗುರುತಿನ ಸಂಖ್ಯೆ, ನಿಗದಿತ ಅರ್ಜಿ ನಮೂನೆ ಮತ್ತು ಫೋಟೋ, 20 ರೂ. ಸ್ಟಾಂಪ್ ಪೇಪರ್ ಹೇಳಿಕೆ, ರೈತರ ತೃಪ್ತಿಕರ ಪ್ರಮಾಣಪತ್ರ ಹಾಗೂ ಹಾಗೂ ರೈತರು ತಮ್ಮ ಭಾಗದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಚಲನ್ ಪ್ರತಿ ಸಲ್ಲಿಸಬೇಕು. ಕೃಷಿ ಉತ್ಪನ್ನ ಸಂಸ್ಕರಣಾ ಘಟಕ ಆರಂಭಿಸಲು ಇದೇ ನೀತಿ ಅನ್ವಯವಾಗಲಿದೆ.

2020-21 ನೇ ಸಾಲಿನಲ್ಲಿ 467.59 ಕೋಟಿ ರೂ. ಸಹಾಯಧನ ಒದಗಿಸಿ, ಸುಮಾರು 8.48 ಲಕ್ಷ ಫಲಾನುಭವಿಗಳಿಗೆ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನ ಸಂಸ್ಕರಣೆ ಘಟಕಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ 695 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 20 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ರೈತ ಸಿರಿ ಯೋಜನೆ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು (ರಾಗಿ, ಜೋಳ, ಸಜ್ಜೆ ಹೊರತಾಗಿ) ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ನಗದು ಪ್ರೋತ್ಸಾಹಧನ ನೀಡಲಾಗುತ್ತದೆ.

2019-20 ನೇ ಸಾಲಿನಲ್ಲಿ ರೈತ ಸಿರಿ ಯೋಜನೆಯಡಿ 42,684 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆದ 49,702 ರೈತರಿಗೆ 1,288 ಕೋಟಿ ರೂ. ವೆಚ್ಚದಲ್ಲಿ (ಹೆಕ್ಟೇರ್‌ಗೆ ರೂ.10,000 ಗಳಂತೆ ಗರಿಷ್ಠ 2 ಹೆಕ್ಟೇರ್‌ಗೆ) ಪ್ರೋತ್ಸಾಹ ಧನವನ್ನು ನೀಡಲಾಗಿದೆ.

2020-21ನೇ ಸಾಲಿನಲ್ಲಿ 4.22 ಕೋಟಿ ರೂ. ವೆಚ್ಚದಲ್ಲಿ 6,288 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನಗಳನ್ನು ಬೆಳೆದ 8,772 ರೈತರಿಗೆ ಹಾಗೂ 416 ಹೆಕ್ಟೇರ್ ಪ್ರದೇಶದಲ್ಲಿ ಚಿಯಾ/ಕ್ವಿನೋವಾ/ಟೆಫ್ ಬೆಳೆಗಳನ್ನು ಬೆಳೆದ 1,040 ರೈತರಿಗೆ ಪ್ರೋತ್ಸಾಹ ಧನ ವಿತರಿಸಲಾಗಿದೆ.

ಸಾವಯವ ಕೃಷಿ:ಸಾವಯವ ಕೃಷಿ ಅಳವಡಿಕೆ, ದೃಢೀಕರಣ ಕಾರ್ಯಕ್ರಮದಡಿ ಆಸಕ್ತ ಗುಂಪು ಮತ್ತು ವ್ಯಕ್ತಿಗತ ಪ್ರಸ್ತಾವನೆಗಳನ್ನು ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ (ಕೆಎಸ್‌ಒಸಿಎ) ಪರಿಶೀಲಿಸಿ ನೋಂದಾಯಿಸಲಾಗುತ್ತದೆ. ಸಾವಯವ ಕೃಷಿ ಪೂರಕ ಘಟಕಗಳ ನಿರ್ಮಾಣ ಹಾಗೂ ಪ್ರಮಾಣೀಕರಣ ಶುಲ್ಕಕ್ಕೆ ಶೇ.75 ಸಹಾಯಧನ ನೀಡಲಾಗುತ್ತದೆ.

2019-20 ಹಾಗೂ 2020-21 ನೇ ಸಾಲಿನಲ್ಲಿ ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಕಾರ್ಯಕ್ರಮದಡಿ 15.658. ರೈತರನ್ನು ಒಳಗೊಂಡಂತೆ 21,400 ಹೆಕ್ಟೇರ್‌ಗಳಿಗಿಂತಲೂ ಹೆಚ್ಚಿನ ಪ್ರದೇಶವನ್ನು 17 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಮೂಲಕ ಸಾವಯವ ಪ್ರಮಾಣೀಕರಣಕ್ಕೆ ಒಳಪಡಿಸಲಾಗಿದೆ.

ಬೀಜಗಳ ಪೂರೈಕೆ:ಎಲ್ಲ ವರ್ಗದ ರೈತರಿಗೆ ಗರಿಷ್ಟ 2 ಹೆಕ್ಟೇರ್​ವರೆಗೆ ರಿಯಾಯಿತಿ ದರದಲ್ಲಿ ಗುಣಮಟ್ಟ ಬೀಜಗಳ ವಿತರಣೆ ಮಾಡಲಾಗುತ್ತಿದೆ. ರೈತರು ತಮ್ಮ ಗುರುತಿನ ಸಂಖ್ಯೆ (ಎಫ್‌ಐಡಿ), ನಿಗದಿತ ನಮೂನೆ ಮತ್ತು ಶುಲ್ಕ ಪಾವತಿಸಿದಲ್ಲಿ ದಾಸ್ತಾನು ಲಭ್ಯವಿದ್ದರೆ 24 ಗಂಟೆಯೊಳಗೆ ಬೀಜ ವಿತರಿಸಲಾಗುತ್ತದೆ.

ರೈತರಿಗೆ ಶೇ.90 ರಿಯಾಯಿತಿ ಆಧಾರದಲ್ಲಿ ಹನಿ/ತುಂತುರು ನೀರಾವರಿ ಸೆಟ್‌ಗಳ ವಿತರಣೆ ಮಾಡಲಾಗುತ್ತದೆ. ಎಲ್ಲ ವರ್ಗದ ರೈತರು ಯೋಜನೆ ಪಡೆಯಲು ಅರ್ಹರಿದ್ದು, ರೈತರ ಗುರುತಿನ ಸಂಖ್ಯೆ, ನಿಗದಿತ ಅರ್ಜಿ ಮತ್ತು ಫೋಟೋ, ರೈತ ಸಂಪರ್ಕ ಕೇಂದ್ರದ ವರದಿ, 20 ರೂ, ಸ್ಟ್ಯಾಂಪ್ ಪೇಪರ್ ಹೇಳಿಕೆ, ನೀರಾವರಿ ಮೂಲ, ರೈತರು ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಿದ ಚಲನ್ ಪ್ರತಿ ನೀಡಬೇಕು. ಜೇಷ್ಠತೆ ಹಾಗೂ ಅನುದಾನ ಲಭ್ಯತೆ ಆಧಾರದ ಮೇರೆಗೆ ದಾಖಲಾತಿಗಳನ್ನು ಸಲ್ಲಿಸಿದ 30 ದಿನಗಳಲ್ಲಿ ಯೋಜನೆ ಸೌಲಭ್ಯ ಸಿಗಲಿದೆ.

ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ( ಕೃಷಿ ಸಂಜೀವಿನಿ) ಸ್ಥಾಪನೆ :ಕೀಟ-ರೋಗ ಮುತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶಗಳ ಕೊರತೆ ಮತ್ತು ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಲೂಕುಗಳಿಗೆ ಭೇಟಿ ನೀಡಿ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ರಾಜ್ಯ ಸರ್ಕಾರದ ವತಿಯಿಂದ 60 ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಿ, ಯೋಜನೆ ಅನುಷ್ಠಾನಕ್ಕಾಗಿ 12.70 ಕೋಟಿ ರೂ. ನೀಡಲಾಗಿದೆ.

ABOUT THE AUTHOR

...view details