ಬೆಂಗಳೂರು :ರಾಜ್ಯ ಸರ್ಕಾರ ತನ್ನ 2022-23ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆರ್ಥಿಕ ಕ್ಷೇತ್ರಗಳಲ್ಲೂ ನಿರೀಕ್ಷೆಗಳು ಹೆಚ್ಚಾಗಿದ್ದು, ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಭಾಗದ ರೈತಾಪಿ ವರ್ಗದಲ್ಲೂ ಹಲವು ನಿರೀಕ್ಷೆಗಳಿವೆ.
ರಾಜ್ಯ ರೈತ ಸಮುದಾಯದ ನಿರೀಕ್ಷೆಗಳ ಕುರಿತಂತೆ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್ ಮತ್ತಿತರರು ರಾಜ್ಯ ಸರ್ಕಾರಕ್ಕೆ ಬೇಡಿಕೆಗಳನ್ನೂ ಈಗಾಗಲೇ ಸಲ್ಲಿಸಿದ್ದಾರೆ. ಬಜೆಟ್ನಲ್ಲಿ ರೈತ ಸಮುದಾಯದ ನಿರೀಕ್ಷೆಗಳೇನು ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ.
ರೈತರಿಗೆ ಆರೋಗ್ಯ ವಿಮೆ : ರಾಜ್ಯದ ರೈತರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಉದಾಹರಣೆಗೆ ಕಬ್ಬು ಬೆಳೆಗಾರ ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಪ್ರತಿ ಟನ್ಗೆ ಒಂದು ರೂ.ನಂತೆ ಕಡಿತ ಮಾಡಿ ಇಷ್ಟೇ ಸಮನಾದ ಮೊತ್ತವನ್ನು ಸರ್ಕಾರವೂ ಹಾಕಿ ಕಬ್ಬು ಬೆಳೆಗಾರ ರೈತ ಕುಟುಂಬಕ್ಕೆ ಆರೋಗ್ಯ ವಿಮೆ ನೀಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ಕೃಷಿ ಕ್ಷೇತ್ರದ ಬಜೆಟ್ ನಿರೀಕ್ಷೆಗಳ ಕುರಿತಂತೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿರುವುದು.. ಜೀವವಿಮೆ ನೀಡಲು ಒತ್ತಾಯ :ತೆಲಂಗಾಣ ರಾಜ್ಯದಲ್ಲಿ ರೈತರು ಆಕಸ್ಮಿಕವಾಗಿ, ಅಪಘಾತದಿಂದ ಅಥವಾ ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇಂತಹುದೇ ಯೋಜನೆಯನ್ನು ರಾಜ್ಯದ ರೈತರಿಗೂ ನೀಡಬೇಕು.
ಕನಿಷ್ಠ ಬೆಂಬಲ ಬೆಲೆ :ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಖರೀದಿ ಕೇಂದ್ರಗಳಲ್ಲಿ ಪಂಜಾಬ್, ತಮಿಳುನಾಡು, ತೆಲಂಗಾಣ ಮಾದರಿಯಲ್ಲಿ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಬೇಕು. ಸರ್ಕಾರವೇ ಎಲ್ಲ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಎಲ್ಲ ಬೆಳೆಗಳಿಗೆ ವಿಮೆ ನೀಡಬೇಕು. ಅತಿವೃಷ್ಟಿ, ಪ್ರಕೃತಿ ವಿಕೋಪ, ಬೆಳೆನಷ್ಟಕ್ಕೆ ಸಂಪೂರ್ಣ ವಿಮೆ ಸಿಗುವಂತಿರಬೇಕು. ಕೃಷಿಯಲ್ಲಿ ಬಳಸುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಹಾಗೂ ಟ್ರ್ಯಾಕ್ಟರ್ ಮತ್ತಿತರೆ ಯಂತ್ರೋಪಕರಣಗಳ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಬೇಕು
ಕೃಷಿ ಸಾಲ ನೀತಿ ಬದಲಾಗಬೇಕು: ಕೊರೊನಾದಿಂದ ರೈತರು ಕೂಡ ಸಾಕಷ್ಟು ನಷ್ಟ ಅನುಭವಿಸಿದ್ದು, ಎಲ್ಲ ರೈತರಿಗೂ ಪಹಣಿ ಆಧರಿಸಿ ಕನಿಷ್ಠ 3 ಲಕ್ಷ ಆಧಾರ ರಹಿತ ಹಾಗೂ ಬಡ್ಡಿರಹಿತ ಸಾಲ ನೀಡುವ ಯೋಜನೆ ಎಲ್ಲ ಬ್ಯಾಂಕುಗಳಲ್ಲಿ ಜಾರಿಗೊಳಿಸಬೇಕು. ಕೃಷಿ ವಿವಿಗಳು ಅಂತಾರಾಷ್ಟ್ರೀಯ ರೈತರ ದಿನವಾದ ಡಿ. 23ನ್ನು ಹಬ್ಬದ ರೀತಿ ಆಚರಿಸಬೇಕು.
ಕಾಡಂಚಿನ ರೈತರು ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ರಾಜ್ಯ ಒತ್ತಾಯಿಸಬೇಕು. ರಾಜ್ಯ ಸರ್ಕಾರದ ಅಮೃತ ರೈತ ಉತ್ಪಾದಕ ಸಂಸ್ಥೆಗಳಲ್ಲಿ ಶೇ. 50ರಷ್ಟನ್ನು ಮಹಿಳಾ ಸದಸ್ಯರಿಗೆ ಮೀಸಲಿಡಬೇಕು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸೇರಿಕೊಳ್ಳಲು ಅವಕಾಶ ಕಲ್ಪಿಸಬೇಕು.
ಜಿಲ್ಲಾಧಿಕಾರಿ ಸಭೆ ಕಡ್ಡಾಯಗೊಳಿಸಬೇಕು :ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಸಭೆ ನಡೆಸಿ, ಇತ್ಯರ್ಥಪಡಿಸಲು ಸರ್ಕಾರ ಕಠಿಣ ಸೂಚನೆ ನೀಡಬೇಕು. ರೈತರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಹಾಗೆಯೇ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು 30 ಅಂಶಗಳುಳ್ಳ ಬೇಡಿಕೆಗಳನ್ನು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪರಿಗಣಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅವುಗಳನ್ನು ಪರಿಗಣಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಟೀಕಿಸಿದ ಕೇಸರಿ ಪಡೆ
ಕೃಷಿಗೆ ಪ್ರಾಧಾನ್ಯತೆ ನೀಡಬೇಕು:ಈ ಕುರಿತಂತೆ ಈಟಿವಿ ಜತೆ ಮಾಹಿತಿ ಹಂಚಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರ ಯಾವ ಬಜೆಟ್ನಲ್ಲಿಯೂ ಗ್ರಾಮೀಣ ಕರ್ನಾಟಕಕ್ಕೆ ನ್ಯಾಯ ಒದಗಿಸಿಲ್ಲ. ಇಂದಿಗೂ ಅತಿ ಹೆಚ್ಚು ಜನ ವಾಸಿಸುತ್ತಿರುವುದು ಗ್ರಾಮೀಣ ಭಾಗದಲ್ಲೇ. ಆದರೆ, ಸರ್ಕಾರಗಳು ಗ್ರಾಮೀಣ ಭಾಗವನ್ನು ಬಜೆಟ್ ವೇಳೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. 80ರ ದಶಕದಲ್ಲಿ ಹೋರಾಟಗಳನ್ನು ಆರಂಭಿಸಿದಾಗ ಬಜೆಟ್ನಲ್ಲಿ ಕೇವಲ 1 ರಷ್ಟು ಮಾತ್ರ ಕೃಷಿಗೆ ಕೊಡುತ್ತಿದ್ದರು. ನಂತರ ಹೋರಾಟಗಳಿಗೆ ಮಣಿದು ಹೆಚ್ಚಿಸುತ್ತಾ ಬಂದರು. ಇದೀಗ ಬಜೆಟ್ ನ ಶೇ. 7-8 ರಷ್ಟು ಮಾತ್ರ ಕೃಷಿಗೆ ಕೊಡುತ್ತಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು ಎಂದಿದ್ದಾರೆ.
ಕನಿಷ್ಟ ಬೆಂಬಲ ಬೆಲೆ ವೈಜ್ಞಾನಿಕವಾಗಿ ನಿರ್ಧರಿಸಬೇಕು:ಸರ್ಕಾರ ಬಜೆಟ್ನಲ್ಲಿ ಕೃಷಿ, ತೋಟಗಾರಿಕೆ, ಹೈನುಹಾರಿಕೆ, ಮೀನುಗಾರಿಕೆಗೆ ಮತ್ತಿತರೆ ಕೃಷಿ ಸಂಬಂಧಿಸಿದಂತೆ ಉತ್ಪಾದನಾ ಕ್ಷೇತ್ರಗಳಿಗೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮಾತ್ರವೇ ನೆರವು ಕೊಡುತ್ತಿದ್ದಾರೆ. ಬೀಜ, ಬಿತ್ತನೆ, ಬೆಳೆ, ಸಂಸ್ಕರಣೆಗಳಿಗೆ ಹಣ ತೊಡಗಿಸುತ್ತಿದ್ದಾರೆ. ಆದರೆ, ರೈತರ ಉತ್ಪನ್ನಗಳಿಗೆ ಈವರೆಗೆ ಕನಿಷ್ಟ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸುತ್ತಿಲ್ಲ. ರಾಗಿಗೆ 1,700 ರೂ. ಕನಿಷ್ಟ ಬೆಲೆ ನಿಗದಿ ಮಾಡಿದ್ದಾರೆ, ಮಾರುಕಟ್ಟೆ ಬೆಲೆ 3,377 ರೂ. ಇದೆ. ಇಂತಹ ಅವೈಜ್ಞಾನಿಕ ಬೆಲೆ ಕೈಬಿಟ್ಟು ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ಈ ಕುರಿತಂತೆ ಸುಧಾರಣೆ ತರಲು ಆವರ್ತನಿಧಿ ಸ್ಥಾಪಿಸಬೇಕು.
ಗ್ರಾಮೀಣ ಕೈಗಾರಿಕೆಗಳನ್ನು ಸ್ಥಾಪಿಸಬೇಕು : ಇಂದು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ನಗರ ಪ್ರದೇಶಗಳಲ್ಲಿ ಸಿದ್ದವಸ್ತುಗಳನ್ನು ತಯಾರಿಸಲಾಗುತ್ತಿದೆ. ಇದನ್ನು ತಪ್ಪಿಸಿ, ಸಿದ್ದವಸ್ತುಗಳನ್ನು ಗ್ರಾಮೀಣ ಮಟ್ಟದಲ್ಲೇ ತಯಾರಿಸಲು ಗ್ರಾಮೀಣ ಕೈಗಾರಿಕೆಳನ್ನು ಸ್ಥಾಪಿಸಬೇಕು. ರಾಜ್ಯದ ಜೋಳವನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಹಸುಗಳ ಮೇವು ತಯಾರಿಸಿ ಇಲ್ಲಿಗೇ ಕಳುಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಿದ್ದರೆ, ಕರ್ನಾಟಕ ಏನು ಮಾಡುತ್ತಿದೆ. ಹೀಗಾಗಿ, ಗ್ರಾಮೀಣ ಕೈಗಾರಿಕೆಗೆ ಉತ್ತೇಜನ ನೀಡಬೇಕು, ಇದರಿಂದ ಗ್ರಾಮೀಣ ಯುವಕರಿಗೆ ಉದ್ಯೋಗವೂ ಸಿಗಲಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.