ಬೆಂಗಳೂರು:2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಇನ್ನೆರಡು ದಿನಗಳು ಬಾಕಿ ಇವೆ. ಈ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಏನೆಲ್ಲಾ ಸಿಗಬೇಕು ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ಈಟಿವಿ ಭಾರತದ ಜೊತೆ ಮಾತನಾಡಿದರು.
ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ: ಕೊರೊನಾದಿಂದಾಗಿ ಕನ್ನಡ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ರಾಜ್ಯ ಸರ್ಕಾರ ನಮ್ಮ ಕೆಲ ಬೇಡಿಕೆಗಳನ್ನು ಪೂರೈಸಲು ಆಗಿಲ್ಲ. ಬಹಳ ಮುಖ್ಯವಾಗಿ ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವ ಚಿತ್ರ ನಗರಿ ಸ್ಥಾಪನೆಗೆ ಮೊದಲು ಆದ್ಯತೆ ಕೊಡಬೇಕು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದರು. ಆದರೆ ಇಲ್ಲಿವರೆಗೂ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಜಾಗ ಕೊಟ್ಟಿಲ್ಲ. ಮೊದಲು ಇದಕ್ಕೆ ಜಾಗ ನೀಡಿ, ಶಂಕುಸ್ಥಾಪನೆ ಮಾಡಬೇಕು.
175 ಸಿನಿಮಾಗಳಿಗೆ ಸಬ್ಸಿಡಿ ಕೊಡಿ:ಎರಡನೇಯದಾಗಿ ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಿದೆ. ಈ ಕಾರಣಕ್ಕೆ 125 ಸಿನಿಮಾಗಳಿಗೆ ಸಬ್ಸಿಡಿ ಕೊಡ್ತಾ ಇದ್ದೀರಾ. ಈಗ 50 ಸಿನಿಮಾಗಳನ್ನು ಹೆಚ್ಚಿಸುವ ಮೂಲಕ ಒಟ್ಟು 175 ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟಾಗ ಕೆಲ ನಿರ್ಮಾಪಕರಿಗೆ ಸಹಾಯ ಆಗುತ್ತೆ.
ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಜಿಎಸ್ಟಿ ಹಾಕಲಾಗಿದೆ. ಆ ಜಿಎಸ್ಟಿ ಹಣವನ್ನು ಆಯಾ ನಿರ್ಮಾಪಕರಿಗೆ ಕೊಡುವಂತೆ ಸಾಕಷ್ಟು ಸಭೆಗಳನ್ನು ಮಾಡಲಾಯಿತು. ಈ ಸಭೆಯ ಚರ್ಚೆಯಂತೆ ಜಿಎಸ್ಟಿ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿದಾಗ ನಿರ್ಮಾಪಕರಿಗೆ ಸಹಾಯವಾಗಲಿದೆ ಎಂದು ಹೇಳಿದರು.