ಮಾನವನ ವ್ತಕ್ತಿತ್ವ ಪರಿಪೂರ್ಣಗೊಳಿಸುವಲ್ಲಿ ಶಿಕ್ಷಣ ಪ್ರಮುಖ ಮಾತ್ರ ವಹಿಸಿದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 2022 ರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದ್ದು, ಇದಕ್ಕೆ ಬೇಕಾದ ಪ್ರಕ್ರಿಯೆಗಳು ಚುರುಕಿನಿಂದ ನಡೆಯಬೇಕಾಗಿದೆ. ಈಗಾಗಲೇ ಒಂದಿಷ್ಟು ಸಿದ್ಧತೆ ಕೂಡ ನಡೆದಿದೆ.
ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದ ಶಿಕ್ಷಣ ನೀತಿಯಿದೆ. ಹಾಗಾಗಿ ಪ್ರಸ್ತುತ ಶಿಕ್ಷಣ ನೀತಿಯಲ್ಲಿ ಒಂದಿಷ್ಟು ಬದಲಾವಣೆ, ವಿಷಯವಾರು ಆಯ್ಕೆಗೆ ಮುಕ್ತ ಅವಕಾಶ, ಪುಸ್ತಕದ ಹೊರೆ ಕಡಿಮೆ ಮಾಡಿ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿ ಎಲ್ಲೆಡೆ ಒಂದೇ ತರನಾದ ನೀತಿ ರೂಪಿಸುವುದೇ ಈ ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ.
ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕ್ರಮ ವಹಿಸಿರುವ ರಾಜ್ಯ ಸರ್ಕಾರ, ಈ ನೂತನ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರಲು ಸಮಿತಿಯೊಂದನ್ನು ರಚಿಸಿದೆ. ಈಗಾಗಲೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯ, ಕಾಲೇಜುಗಳ ನ್ಯಾಕ್ ಮಾನ್ಯತೆ, ಎನ್ಐಆರ್ಎಫ್ ಶ್ರೇಯಾಂಕ ಪಡೆಯುವ ಸಂಬಂಧ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಸೂಚನೆ ನೀಡಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಬಳ್ಳಾರಿಯಲ್ಲಿ ಈಗಾಗಲೇ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಈ ಕುರಿತು ತರಬೇತಿ ನೀಡುವ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿದೆ.