ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದೆ. ಶಿವಾಜಿನಗರ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ದೇಶದ ಕೃಷಿ ವಲಯವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇಂದು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಇಲ್ಲ.
ನೀರಾವರಿ ಸೌಲಭ್ಯ, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲ ಸೌಲಭ್ಯ, ತಂತ್ರಜ್ಞಾನ ಸರಿಯಾಗಿ ಸಿಗದ ಪರಿಣಾಮ ರೈತರು ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಅಸಂಖ್ಯಾತ ರೈತರು ಮತ್ತು ಕೃಷಿ ಕೂಲಿಕಾರರು ಕೃಷಿಯಿಂದ ದೂರವಾಗಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ನಮ್ಮ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂದರು.
ದೆಹಲಿ ರೈತರ ಹೋರಾಟಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿವೆ. ಈ ಕಾಯ್ದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ತಿದ್ದುಪಡಿಗೆ ಒಳಗಾದ ಮೂರು ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನ ಮತ್ತು ಸರಕು ಸೇವೆಗಳ ಮಾರಾಟ ಕಾಯಿದೆ (ಎಪಿಎಂಸಿ) ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಗಳು ರೈತರಿಗೆ ಮಾರಕವಾಗಿ ಕೃಷಿಯನ್ನು ನಾಶಗೊಳಿಸಿ ಅಂಬಾನಿ, ಅದಾನಿ ಸೇರಿದಂತೆ ಇತರ ಕಾರ್ಪೋರೇಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಕೃಷಿಯನ್ನು ಒಪ್ಪಿಸಲಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ಜಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದು ರೈತರ ಹೋರಾಟಕ್ಕೆ ಜಯವಾಗಿದೆ. ಆದರೆ, ತಜ್ಞರ ಸಮಿತಿ ರಚಿಸಿರುವುದು ಕುರಿಯನ್ನು ಕಾಯಲು ತೋಳವನ್ನು ಕಾವಲಿಗೆ ಇಟ್ಟಂತೆ ಆಗಿದೆ. ಆದ್ದರಿಂದ ಈ ಸಮಿತಿಯನ್ನು ರದ್ದುಗೊಳಿಸಿ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಜನ ಸೇವಕ ಸಮಾವೇಶ ರದ್ದುಪಡಿಸುವಂತೆ ಆಗ್ರಹ : ಬೆಳಗಾವಿಯಲ್ಲಿ ಪ್ರತಿಭಟನೆ