ಬೆಂಗಳೂರು :ಕೋವಿಡ್ ಹಾಗೂ ರೂಪಾಂತರಿ ಒಮಿಕ್ರಾನ್ ಸೋಂಕು ಹರಡದಂತೆ ತಡೆಯಲು ರಾಜ್ಯಾದ್ಯಂತ ಇಂದು ರಾತ್ರಿ 10 ಗಂಟೆಯಿಂದಲೇ ವಾರಾಂತ್ಯದ ನಿಷೇಧಾಜ್ಞೆ ಇರಲಿದೆ. ರಾತ್ರಿ 10 ಗಂಟೆಯಿಂದ ಆರಂಭವಾಗುವ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ. ಹಲವು ನಿರ್ಬಂಧ ವಿಧಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರವು ಇದೇ ತಿಂಗಳ 19ರವರೆಗೆ ವಾರಾಂತ್ಯ ಕರ್ಫ್ಯೂ ಜೊತೆಗೆ ಕೆಲವು ನಿರ್ಬಂಧ ವಿಧಿಸಿದೆ. ಅಲ್ಲದೇ ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಲ್ಲಿರಲಿದೆ. ಜ.19ರವರೆಗೆ ಈ ನಿಷೇಧಾಜ್ಞೆ ಇರುತ್ತೆ.
ಅಲ್ಲದೆ, ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ/ಎಲ್‌ಕೆಜಿ/ಯುಕೆಜಿ ಹಾಗೂ 1 ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಜನವರಿ 19ರವರೆಗೆ ಸ್ಥಗಿತಗೊಳಿಸಲಾಗಿದೆ.
ಅಷ್ಟೇ ಅಲ್ಲ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ 10ನೇ ತರಗತಿಯ ಆಯಾ ಭಾಗದ ಎಲ್ಲ ಕೋಚಿಂಗ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಬಿಎಂಟಿಸಿ ಸಂಚಾರ ಇರಲ್ಲ:ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಓಡಾಟ ಕೂಡ ಇರುವುದಿಲ್ಲ. ಆದರೆ, ವಿಮಾನ ನಿಲ್ದಾಣಕ್ಕೆ ತೆರಳಲು ಯಾವುದೇ ಅಡ್ಡಿಯಿಲ್ಲ ಎಂದು ಬಿಎಂಟಿಸಿ ತಿಳಿಸಿದೆ. ವಾಯುವಜ್ರ ಬಸ್ ಸಂಚರಿಸುತ್ತವೆ. ಪ್ರಯಾಣಿಕರು ಕಡ್ಡಾಯವಾಗಿ ವಿಮಾನದ ಟಿಕೆಟ್ ಹೊಂದಿರಲೇಬೇಕು.
ಅಗತ್ಯ ಸೇವೆಯಡಿ ಮಾತ್ರ ಬಿಎಂಟಿಸಿ ಬಸ್ ಓಡಾಟ ಇರಲಿದೆ. ಸಾರ್ವಜನಿಕ ಸಂಚಾರ ಸೇವೆ ಇಲ್ಲ. ಕೊರೊನಾ ವಾರಿಯರ್ಸ್ಗೆ ಸಂಚಾರಕ್ಕೆ ಅವಕಾಶವಿದ್ದು, ಐಡಿ ಕಾರ್ಡ್ ಕಡ್ಡಾಯವಾಗಿದೆ.
ಮೆಟ್ರೋ ಸಂಚಾರ :ಬೆಂಗಳೂರಿನಲ್ಲಿ ಶನಿವಾರ-ಭಾನುವಾರ ಎಂದಿನಂತೆ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲೂ ಮೆಟ್ರೋ ಕಾರ್ಯಾಚರಣೆ ಇರಲಿದೆ. ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಕೋವಿಡ್ ನಿಯಮದನ್ವಯ ಮೆಟ್ರೋ ಓಡಿಸಲು ನಿರ್ಧಾರ ಮಾಡಲಾಗಿದೆ. ಸಂಚಾರದ ಅವಧಿ ಕಡಿತಗೊಳಿಸಲಾಗಿದೆ. ಕರ್ಫ್ಯೂ ವೇಳೆ ಅರ್ಧ ಗಂಟೆಗೊಂದು ಮೆಟ್ರೋ ರೈಲು ಮಾತ್ರ ಓಡಾಡಲಿದೆ.
ರಾಜ್ಯಾದ್ಯಂತಶಾಲೆಗೆ ರಜೆ :ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ನಡೆಸದಿರಲು ಸೂಕ್ತ ಕ್ರಮವಹಿಸುವಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಜಿಲ್ಲಾಡಳಿತವು ಈ ಬಗ್ಗೆ ಘೋಷಣೆ ಮಾಡಿದೆ.
ಮದ್ಯದಂಗಡಿ ಬಂದ್ :ಅದೇ ರೀತಿ ವಾರಾಂತ್ಯ ಕರ್ಫ್ಯೂ ಅವಧಿಯಾದ ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆವರೆಗೂ ರಾಜ್ಯದಲ್ಲಿ ಬಾರ್, ವೈನ್ ಶಾಪ್ ಸೇರಿದಂತೆ ಯಾವುದೇ ರೀತಿಯ ಮದ್ಯದಂಗಡಿ ತೆರೆಯದಂತೆ ಅಬಕಾರಿ ಇಲಾಖೆ ತಿಳಿಸಿದೆ.
ಕೆಎಸ್ಆರ್ಟಿಸಿ ಸೇವೆ :ನಿಷೇಧಾಜ್ಞೆ ಸಮಯದಲ್ಲಿ ಕೆಎಸ್ಆರ್ಟಿಸಿ ಸೇವೆ ಎಂದಿನಂತೆ ಇರಲಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ ಸಂಚರಿಸಲಿವೆ. ಅಂತಾರಾಜ್ಯ ಬಸ್ ಸಂಚಾರವೂ ಇರಲಿದೆ. ಪ್ರಮುಖವಾಗಿ ಗೋವಾ, ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ.
ಮಂಡ್ಯದಲ್ಲಿ 144 ಸೆಕ್ಷನ್ :ಇತ್ತೀಚೆಗೆ ತಮಿಳುನಾಡಿನ ಓಂ ಶಕ್ತಿ ದೇವಾಯಕ್ಕೆ ಹೋಗಿ ಬಂದ ಮಂಡ್ಯ ಜಿಲ್ಲೆಯ 89 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜ-19ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಲವು ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ವಾರಾಂತ್ಯದ ನಿಷೇಧಾಜ್ಞೆ ಕೂಡ ಇದೆ.
ಪ್ರಮುಖವಾಗಿ ರಾಜ್ಯಾದ್ಯಂತ ಏನಿರುತ್ತೆ, ಏನಿರಲ್ಲ :
- ಆಹಾರ ಧಾನ್ಯ, ಹಾಲು, ದಿನಸಿ, ಹಣ್ಣು,ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನ ಮಾರಾಟಕ್ಕೆ ಅವಕಾಶ.
- ಬೀದಿಬದಿ ವ್ಯಾಪಾರ, ನ್ಯಾಯಬೆಲೆ ಅಂಗಡಿ, ಪಶು ಆಹಾರ ಮಾರಾಟ ಕೇಂದ್ರಕ್ಕೆ ಅವಕಾಶ.
- ಎಲ್ಲ ಸಾರ್ವಜನಿಕ ಉದ್ಯಾನಗಳು ಬಂದ್ ಇರಲಿದ್ದು, ಫಿಟ್ನೆಸ್ ಪ್ರಿಯರಿಗೆ ಕೊಂಚ ತೊಡಕಾಗಲಿದೆ.
- ಬೆಂಗಳೂರಿನಲ್ಲಿ ಐಟಿ ಸೇರಿದಂತೆ ಎಲ್ಲ ಬಗೆಯ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ಕೊಟ್ಟಿರುವುದರಿಂದ ನೌಕರರ ಓಡಾಟ ಇರಲಿದೆ. ಐಡಿ ಕಾರ್ಡ್ ಜೊತೆಗೆ ಇಟ್ಟುಕೊಂಡು ನಮ್ಮ ಮೆಟ್ರೋ, ಹಾಗೂ ಖಾಸಗಿ ವಾಹನಗಳಲ್ಲಿ ಸಂಚಾರ ಮಾಡಬಹುದಾಗಿದೆ.
- ರೋಗಿಗಳು ಹಾಗೂ ಸಹಾಯಕರು ಕನಿಷ್ಠ ದಾಖಲೆ ಪ್ರದರ್ಶಿಸಿ ಸಂಚರಿಸಬಹುದು.
- ಆಹಾರ ವಿತರಣೆ ಸೇರಿದಂತೆ ಇ-ಕಾಮರ್ಸ್ ಸೇವೆಯನ್ನು ದಿನದ 24 ಗಂಟೆಯೂ ಒದಗಿಸಲು ಅವಕಾಶ
- ಬೆಂಗಳೂರಲ್ಲಿ ಸಾಕಷ್ಟು ಜನ ಉದ್ಯೋಗಿಗಳು ಹೊರಗಿನ ಆಹಾರಕ್ಕೆ ಅವಲಂಬಿತರಾಗಿದ್ದಾರೆ. ರೆಸ್ಟೋರೆಂಟ್, ತಿಂಡಿ-ತಿನಿಸು ಮಾರಾಟ ಕೇಂದ್ರಗಳಿಂದ ಪಾರ್ಸೆಲ್ಗೆ ಅನುಮತಿ ನೀಡಲಾಗಿದೆ.
- ಬೇರೆ ಬೇರೆ ಊರುಗಳಿಗೆ ಸಂಚರಿಸುವವರಿಗೆ ಅವಕಾಶ ಇರಲಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಹೋಗಿ ಬರಲು ಟಿಕೆಟ್ ಪ್ರದರ್ಶಿಸಿ ಓಡಾಡಬಹುದು.
- ಚಿತ್ರಮಂದಿರ, ಮಾಲ್, ವಾಣಿಜ್ಯ ಮಳಿಗೆಗಳು, ವಾಹನ ಸರ್ವೀಸ್ ಸೆಂಟರ್, ಈಜು ಕೊಳಗಳು, ಜಿಮ್, ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್, ಗ್ರಂಥಾಲಯ, ಬ್ಯೂಟಿ ಪಾರ್ಲರ್, ಸಲೂನ್ ಶಾಪ್ ತೆರೆಯುವುದಿಲ್ಲ.
- ಈ ಅತ್ಯಗತ್ಯ ಓಡಾಟಗಳನ್ನು ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿದ್ರೆ ವಾಹನಗಳು ಸೀಜ್ ಆಗಲಿವೆ. ರಾಜ್ಯಾದ್ಯಂತ ಪೊಲೀಸ್ ಸರ್ಪಗಾವಲು, ರಸ್ತೆಗಳ ತಡೆ ಇರಲಿವೆ.
- ಹೀಗಾಗಿ, ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಬೀಳಲಿದ್ದು, ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ನಿರ್ಧಾರದಲ್ಲಿ ಬದಲಾವಣೆ ಮಾಡುವ ಭರವಸೆಯನ್ನೂ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಇದನ್ನೂ ಓದಿ:1.17 ಲಕ್ಷಕ್ಕೆ ಏರಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ: ಮೂರನೇ ಅಲೆಗೆ ದೇಶವೇ ತತ್ತರ!