ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹಾಗೂ ರೂಪಾಂತರಿ ಒಮಿಕ್ರಾನ್ ನಿಯಂತ್ರಣಕ್ಕೆ ಸರ್ಕಾರವು ವಾರಾಂತ್ಯದ ನಿಷೇಧಾಜ್ಞೆ ಹೊರಡಿಸಿದ್ದು, ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಎಲ್ಲ ವಿಭಾಗದ ಡಿಸಿಪಿಗಳು ಖುದ್ದು ರಸ್ತೆಗಿಳಿದಿದ್ದಾರೆ. ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಈ ನಿಷೇಧಾಜ್ಞೆ ಮುಂದುವರೆಯಲಿದೆ.
ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಜಯನಗರ ಮುಂತಾದ ಕಡೆ ನಿಷೇಧಾಜ್ಞೆ ಕಾರಣ ಅಂಗಡಿಗಳೆಲ್ಲ ಬಂದ್ ಆಗಿವೆ. ಸರ್ಕಾರವು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿದ್ದು, ಕಠಿಣ ನಿಯಮ ಜಾರಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜನಜಂಗುಳಿ ತಪ್ಪಿಸುವ ನಿಟ್ಟಿನಲ್ಲಿ ಕೆ.ಆರ್.ಮಾರುಕಟ್ಟೆ, ಸುತ್ತಮುತ್ತ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಮಾರ್ಷಲ್ ಮತ್ತು ಪೊಲೀಸರ ನಿಯೋಜನೆ ಮಾಡಿ ಜನರನ್ನು ನಿಯಂತ್ರಿಸಲಾಗಿದೆ. ಇನ್ನೊಂದೆಡೆ ಮಾಸ್ಕ್ ಧರಿಸದವರಿಗೆ ಬೆಳ್ಳಂಬೆಳಗ್ಗೆ ಮಾರ್ಷಲ್ಗಳು ದಂಡ ವಿಧಿಸುತ್ತಿದ್ದಾರೆ.
ಉದ್ಯಾನವನಗಳೂ ಬಂದ್ ಆಗಿರುವ ಕಾರಣ ಜನ ರಸ್ತೆ, ರೈಲ್ವೆ ಹಳಿಗಳ ಪಕ್ಕದಲ್ಲಿ ಜನರು ವಾಯುವಿಹಾರ ಮಾಡುತ್ತಿದ್ದ ದೃಶ್ಯ ಕಂಡುಬಂತು. ಬೀದಿಬದಿ ವ್ಯಾಪಾರಿಗಳಿಗೆ ಅವಕಾಶವಿರುವುದರಿಂದ ಈಗಾಗಲೇ ಹಣ್ಣು, ತರಕಾರಿ ಮಾರಾಟ ನಡೆಸುತ್ತಿದ್ದಾರೆ. ತಿಂಡಿ, ತಿನಿಸುಗಳ ಹೋಟೆಲ್ಗಳಿಗೂ ಕೂಡ ಪಾರ್ಸೆಲ್ಗೆ ಅವಕಾಶವಿದ್ದು, ಮುಂಜಾನೆಯಿಂದಲೇ ಕೆಲಸ ಆರಂಭಿಸಿವೆ.
ರೈಲ್ವೆ ನಿಲ್ದಾಣಗಳಲ್ಲೂ ಮಾರ್ಷಲ್ಗಳು ನಿಗಾ ವಹಿಸಿದ್ದಾರೆ. ಬೇರೆ ಊರುಗಳಿಂದ ಬರುವವರಿಗೆ ರೈಲು ಸಂಚಾರ ಎಂದಿನಂತೆ ಇದ್ದು, ರೈಲ್ವೆ ನಿಲ್ದಾಣದ ಆವರಣದಲ್ಲಿ ಸಾವಿರಾರು ಮಂದಿ ಕಂಡು ಬಂದರು. ಆದರೆ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಓಲಾ, ಊಬರ್ ಆಟೋಗಳಿಗೆ ಬೇಡಿಕೆ ಹೆಚ್ಚಿದೆ.