ಬೆಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆ ರಾಜ್ಯಾದ್ಯಂತ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲವೆಡೆ ಅಗತ್ಯ ವಸ್ತು ಖರೀದಿಗೆ ಜನರು ಮುಗಿಬಿದ್ದಿದ್ದು, ಹೊರತುಪಡಿಸಿ ಬಹಿತೇಕ ಕಡೆ ಜನರು ರಸ್ತೆಗಿಳಿದಿಲ್ಲ.
ಧಾರವಾಡ : ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ವಾಹನಗಳ ಓಡಾಟ ಪ್ರಮಾಣವು ಸಹ ಎಂದಿನಂತಿಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಿ ಜನರು ಮನೆಯತ್ತ ಮುಖ ಮಾಡಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮದುವೆ ಕಾರ್ಯಕ್ರಮಗಳಿಗೆ ನಿಗದಿತ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಹೊಸಪೇಟೆ : ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ನಗರದ ಎಪಿಎಂಸಿಯಲ್ಲಿ ಜನರು ತರಕಾರಿಗಾಗಿ ಮುಗಿಬಿದ್ದಿದ್ದರು. ಹಲವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ನಿರತರಾಗಿದ್ದರು. ನೆಪ ಮಾತ್ರಕ್ಕೆ ಎಪಿಎಂಸಿ ಮುಖ್ಯ ದ್ವಾರಕ್ಕೆ ಬೀಗ ಜಡಿಯಲಾಗಿದ್ದು, ಇನ್ನೊಂದು ಬಾಗಿಲಿನ ಮೂಲಕ ವ್ಯಾಪಾರ ವಹಿವಾಟಿಗೆ ಅನಕೂಲ ಮಾಡಿಕೊಟ್ಟಿರುವುದು ಕಂಡು ಬಂತು.
ಬೀದರ್ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು, ಮಾರುಕಟ್ಟೆಗೂ ಕೂಡ ಜನ ಆಗಮಿಸಿಲ್ಲ. ಪ್ರಯಾಣಿಕರಿಲ್ಲದ ಕಾರಣ ಬಹುತೇಕ ಬಸ್ಗಳು ರಸ್ತೆಗೆ ಇಳಿದಿಲ್ಲ. ಗಾಂಧಿ ಗಂಜ್ ತರಕಾರಿ ಮಾರುಕಟ್ಟೆ ಬೆಳಗ್ಗೆಯಿಂದಲೂ ಜನರಿಲ್ಲದೆ ಖಾಲಿ ಖಾಲಿಯಾಗಿತ್ತು. ಬೆಳಗ್ಗೆ 10 ಗಂಟೆವರೆಗೆ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದ್ದರೂ, ಜನರು ಮಾತ್ರ ಖರೀದಿಗೆ ಬಂದಿಲ್ಲ.
ಮುದ್ದೇಬಿಹಾಳ :ಮುದ್ದೇಬಿಹಾಳ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿತ್ತು. ಅಗತ್ಯ ಸೇವೆಗಳಾದ ಹಾಲು, ಔಷಧಿ, ಪತ್ರಿಕೆ, ತರಕಾರಿ ಮೊದಲಾದ ಸಾಮಗ್ರಿಗಳ ಖರೀದಿಗೆ ಜನ ಹೊರಗಡೆ ಬಂದಿದ್ದರು. ಕಿರಾಣಿ ಸೇರಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲವೆಡೆ ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಸಿಪಿಐ ಆನಂದ ವಾಘಮೋಡೆ, ಪಿಎಸೈ ಎಂ.ಬಿ. ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಪಟ್ಟಣದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಜನ ಸಂಖ್ಯೆ ವಿರಳವಾಗಿತ್ತು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಜನರಿಲ್ಲದ ಕಾರಣ ಬಸ್ಗಳು ರಸ್ತೆಗಿಳಿದಿಲ್ಲ.
ಕಾರವಾರ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕಾರವಾರದಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗ್ಗಿಬಿದ್ದಿದ್ದರು. ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆಗಳಿಗೆ ಗ್ರಾಹಕರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ಅಗತ್ಯ ವಸ್ತುಗಳು ಹೊರತುಪಡಿಸಿ, ಬಟ್ಟೆ ಅಂಗಡಿ, ಹೋಟೆಲ್ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಮೈಸೂರು: ಕರ್ಫ್ಯೂ ಹಿನ್ನೆಲೆ ದೇವರಾಜ ಮಾರುಕಟ್ಟೆ ಸಮೀಪವಿರುವ ಮಟನ್ ಮಾರ್ಕೆಟ್ಗೆ ಮಾಂಸ ಪ್ರಿಯರು ಬರಲಿಲ್ಲ. ಅಲ್ಲದೆ, ನಗರ ಸಾರಿಗೆ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಹಿನ್ನೆಲೆ ಬಸ್ ಸಂಚಾರವೂ ಬಂದ್ ಆಗಿದೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಹಾಗೂ ಪ್ರಯಾಣಕ್ಕೆ ತೊಂದರೆಯಾಗದಿರಲೆಂದು ವಿನಾಯಿತಿ ನೀಡಲಾಗಿದೆ. ಆದರೂ ಕೊರೊನಾ ಆತಂಕದಿಂದ ಸಾರ್ವಜನಿಕರೇ ರಸ್ತೆಗಿಳಿಯುತ್ತಿಲ್ಲ.
ಹಾವೇರಿ : ಹಾವೇರಿಯಲ್ಲೂ ಕರ್ಫ್ಯೂ ಹಿನ್ನೆಲೆ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿನ ದಿನಸಿ ಅಂಗಡಿಗಳೂ ಸೇರಿ ಎಲ್ಲೆಡೆ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಅಗತ್ಯ ವಸ್ತುಗಳ ಖರೀದಿಗೂ ಜನರು ಹೆಚ್ಚಾಗಿ ಬಂದಿಲ್ಲ. ಬಸ್ ನಿಲ್ದಾಣವೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.
ಕೋಲಾರ: ಜಿಲ್ಲೆಯಲ್ಲಿ ಕರ್ಫ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯ ಒಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ವಿನಾಃಕಾರಣ ರಸ್ತೆಗಿಳಿಯುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದು, ಬೆರಳೆಣಿಕೆಯಷ್ಟು ವಾಹನ ಸಂಚಾರ ಬಿಟ್ಟರೆ ಎಲ್ಲವೂ ಬಂದ್ ಆಗಿವೆ. ಏಷ್ಯಾದ ದೊಡ್ಡ ಟೊಮೆಟೊ ಮಾರುಕಟ್ಟೆಗೆ ಬೀಗ ಹಾಕಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಹಿನ್ನೆಲೆ, ಕೋಲಾರದ ಎಪಿಎಂಸಿ ಮಾರುಕಟ್ಟೆಯ ಹೊರಗೆ ಟ್ರಕ್ಗಳು ಸಾಲುಗಟ್ಟಿ ನಿಂತಿವೆ. ಎಪಿಎಂಸಿ ಮಾರುಕಟ್ಟೆ ಸಮಿತಿಯು ಎರಡು ದಿನಗಳ ಕಾಲ ರಜೆ ಘೋಷಿಸಿದೆ.