ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರತಿಷ್ಟಿತ ಕಾರ್ಯಕ್ರಮ 'ಚಿತ್ರಸಂತೆ'ಗೆ ಈಗ 21 ವರ್ಷ. ಕಲಾವಿದರು ಹಾಗೂ ಕಲಾ ಪೋಷಕರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಾ ಬಂದಿರುವ 'ಚಿತ್ರಸಂತೆ' ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿದೆ. ಕಳೆದ ಆರು ದಶಕಗಳಿಂದ ದೃಶ್ಯಕಲಾ ಮಾಧ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಕೊಟ್ಟಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತೀ ವರ್ಷದಂತೆ ಈ ವರ್ಷವೂ 'ಚಿತ್ರಸಂತೆ' ಕಾರ್ಯಕ್ರಮ ಆಯೋಜಿಸಿದೆ. ನಾಳೆ (7ರಂದು) ಈ ಕಾರ್ಯಕ್ರಮ ನಡೆಯಲಿದೆ.
ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ: ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗಮಿಸಿದ್ದರು. ಇಂದು ನಡೆದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದ ಅವರು, ಕರ್ನಾಟಕವು ಕಲೆ, ಸಂಗೀತ, ಸಂಸ್ಕೃತಿಯಲ್ಲಿ ಸಮೃದ್ಧವಾಗಿದೆ. ಕಲೆ ರಕ್ಷಣೆಗೆ ಗ್ಯಾಲರಿಯ ಅಗತ್ಯವಿದೆ. ವಿದೇಶಗಳಲ್ಲಿ ಪರ್ಮನೆಂಟ್ ಆರ್ಟ್ ಗ್ಯಾಲರಿಗಳಿದ್ದು, ಅದೇ ಮಾದರಿಯ ಆರ್ಟ್ ಗ್ಯಾಲರಿಯನ್ನು ಕರ್ನಾಟದಲ್ಲಿ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕಲೆಗೆ ಪ್ರೋತ್ಸಾಹ: ದೇವರಾಜ್ ಅರಸು ಅವರು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ಸ್ಥಳ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಿದರು. ತದನಂತರ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರಾದ ನಂಜುಂಡಪ್ಪ ಅವರು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.