ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು:ಟರ್ಕಿಯಲ್ಲಿ ಭೂಕಂಪ ಹಿನ್ನೆಲೆ ಕನ್ನಡಿಗರು ಸಿಕ್ಕಿಕೊಂಡಿರುವ ಸಾಧ್ಯತೆ ಇದ್ದು, ಕನ್ನಡಿಗರ ಸುರಕ್ಷತೆಗೆ ಎಲ್ಲ ಕ್ರಮಗಳನ್ನೂ ಕೈಗೊಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇದೆ. ಟರ್ಕಿಯಲ್ಲಿ ಕನ್ನಡಿಗರು ಸಿಕ್ಕಿಕೊಂಡಿದ್ದಾರಾ ಎನ್ನುವ ಬಗ್ಗೆ ಮಾಹಿತಿ ಕೇಳಿದ್ದೇನೆ. ವಿಶೇಷ ಫೋನ್ ನಂಬರ್ ಸಹ ಬಿಡುಗಡೆ ಮಾಡಲಾಗಿದೆ. ಕನ್ನಡಿಗರ ಕುಟುಂಬದವರು ಯಾರಾದರೂ ಅಲ್ಲಿದ್ದರೆ ಕರೆ ಮಾಡಿ ಮಾಹಿತಿ ಕೊಡಲಿ ಎಂದು ಮನವಿ ಮಾಡಿದರು.
'ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಕುರಿತು ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿದೆ. ಅಲ್ಲಿರುವ ಭಾರತೀಯರು ಹಾಗೂ ಕನ್ನಡಿಗರ ಕುರಿತು ಮಾಹಿತಿಗಾಗಿ ವಿಶೇಷ ಸಹಾಯ ವಾಣಿಯನ್ನು ವಿದೇಶಾಂಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರ ಶೀಘ್ರದಲ್ಲೇ ಸ್ಥಾಪಿಸಲಿದೆ' ಎಂದು ಅವರು ಟ್ವೀಟ್ ಮಾಡಿ ಹೇಳಿದ್ದಾರೆ.
ರಾಜಕಾಲುವೆ ನಿರ್ವಹಣೆಗೆ ಮಾಸ್ಟರ್ ಪ್ಲಾನ್:ರಾಜಕಾಲುವೆಗಳ ನಿರ್ವಹಣೆಗೆ ವಿಶೇಷ ಮಾಸ್ಟರ್ ಪ್ಲಾನ್ ತಯಾರಿಸುತ್ತಿದ್ದೇವೆ. ಐಐಎಸ್ಸಿ ಸೇರಿ ಕೆಲ ಸಮಿತಿಗಳ ವರದಿ ಆಧರಿಸಿದ ವಿಶೇಷ ಪ್ಲಾನ್ ಇದಾಗಿದ್ದು, ಬೆಂಗಳೂರಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವವರಿಗೆ ಮಹಾಲಕ್ಷ್ಮಿ ಲೇಔಟ್ಗೆ ಬಂದು ನೋಡಲಿ. ಆ ರೀತಿ ವಿನಾ ಕಾರಣ ಆರೋಪ ಮಾಡೋರಿಗೆ ನಮ್ಮ ಗೋಪಾಲಯ್ಯ ಟೂರ್ ಮಾಡಿ ತೋರಿಸಲಿ. ಇದೇ ಥರದ ಅಭಿವೃದ್ಧಿ ನಮ್ಮೆಲ್ಲ ಶಾಸಕರ ಕ್ಷೇತ್ರಗಳಲ್ಲೂ ಆಗಿದೆ ಎಂದರು.
ಇದನ್ನೂ ಓದಿ:ಕೇಸರಿ, ಕುಂಕುಮ ಮನುವಾದದ ಸಂಕೇತವೇ? ಸಿದ್ದರಾಮಯ್ಯಗೆ ಸಿ.ಸಿ ಪಾಟೀಲ್ ಪ್ರಶ್ನೆ
ಈ ಬಾರಿ ದೊಡ್ಡ ಮಳೆ ಬಂದಿದೆ. ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹ ಉಂಟಾಯಿತು. ನಾವು ಹಿಂದೆ ಕೈಗೊಂಡ ಕ್ರಮಗಳ ಫಲವಾಗಿ ಕೇವಲ ಎರಡು ಕ್ಷೇತ್ರಗಳಲ್ಲಿ ಪ್ರವಾಹ ಎದುರಿಸಿದವು. ಹಿಂದಿನವರ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರವಾಹ ಆಗುತ್ತಿತ್ತು. ರಾಜಕಾಲುವೆಗಳನ್ನು ಮುಚ್ಚಿದ್ದು ಹಿಂದಿನ ಸರ್ಕಾರಗಳ ಸಾಧನೆ. ಒತ್ತುವರಿಗಳನ್ನು ತೆಗೆದು ನೀರು ಸರಾಗವಾಗಿ ಹೋಗುವಂತೆ ಮಾಡಿರುವುದು ನಮ್ಮ ಸಾಧನೆ. ಹಿಂದಿನವರು ರಾಜಕಾಲುವೆಗಳ ನಿರ್ವಹಣೆ ಸರಿಯಾಗಿ ಮಾಡಿದ್ದಿದ್ದರೆ ಪ್ರವಾಹ ಆಗುತ್ತಿರಲಿಲ್ಲ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಜನರಿಗಿಂತಲೂ ವಾಹನಗಳೇ ಹೆಚ್ಚಿರುತ್ತವೆ. ಹಾಗಾಗಿ ಸಂಚಾರ ನಿರ್ವಹಣೆಯಲ್ಲಿ ಹಲವು ಬದಲಾವಣೆ ತಂದಿದ್ದೇವೆ ಎಂದರು.
ಎರಡು ತಿಂಗಳಲ್ಲೇ ಸಂಚಾರ ದಟ್ಟಣೆ ಕಡಿಮೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಮಳೆ ಸುರಿಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಅದಕ್ಕೆ ಹೊಸ ಡ್ರೈನೇಜ್ ಸಿಸ್ಟಂ ಮಾಡಿದ್ದೇವೆ. ಹಿಂದೆ ದೊಡ್ಡ ದೊಡ್ಡವರಿಂದ ಕಪ್ಪ ಕಾಣಿಕೆ ತೆಗೆದುಕೊಂಡು ರಾಜಕಾಲುವೆ ಮುಚ್ಚಿದ್ದರು. ಅದನ್ನ ನಾವು ತೆಗೆಸಿದ್ದೇವೆ. ನಿಮ್ಮ ಕಾಲದಲ್ಲಿ ರಾಜಕಾಲುವೆ ಸರಿಯಾಗಿದ್ದರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಡ್ರೈನೇಜ್ ಸಿಸ್ಟಂಗೆ ಹೊಸ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ನಮ್ಮ ಅಭಿವೃದ್ಧಿಗೆ ಜನರ ಮನ್ನಣೆ ಬೇಕು. ಜನರ ಪ್ರೋತ್ಸಾಹ ಮತ್ತು ಬೆಂಬಲ ಸಿಗದಿದ್ದರೆ ನಿರರ್ಥಕ. ಕೆಲಸ ಮಾಡುವವರಿಗೆ ಜನ ಮನ್ನಣೆ, ಬೆಂಬಲ, ಆಶೀರ್ವಾದ ಇರಲಿ. ಬೆಂಗಳೂರಿನ ಅಭಿವೃದ್ಧಿಯ ಪಥ ಮತ್ತಷ್ಟು ವೇಗ ನೀಡಲಿದ್ದೇವೆ. ಈ ಅಭಿವೃದ್ಧಿಗೆ ನಿಮ್ಮ ಬೆಂಬಲ ನೀಡಬೇಕು. ಅದಕ್ಕೆ ಮನ್ನಣೆ, ಬೆಂಬಲ, ಆಶೀರ್ವಾದ ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ಭದ್ರಾವತಿಯ ವಿಐಎಸ್ಎಲ್ ಮುಚ್ಚುವ ನಿರ್ಧಾರ ಹಿಂಪಡೆಯಿರಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ