ಬೆಂಗಳೂರು:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಎರಡನೇ ಮಾತೇ ಇಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿರುವ ಅವರು, ನಿಖಿಲ್-ರೇವತಿ ಮದುವೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಚಿತ್ರೀಕರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ. ಕುಮಾರಸ್ವಾಮಿಯವರು ಕೂಡ ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ರಾಮನಗರದಲ್ಲಿ ಸರಳವಾಗಿ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಾಜಿ ಸಿಎಂ ಹೆಚ್‌ಡಿಕೆ ಮುಂದಾಗಿದ್ದಾರೆ. ತಮ್ಮ ಕುಟುಂಬದವರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ನಿನ್ನೆಯಷ್ಟೇ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರಲ್ಲದೆ, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಯಾರೂ ಕೂಡ ಇಲ್ಲಿಗೆ ಆಗಮಿಸದೆ ಮನೆಯಿಂದಲೇ ದಂಪತಿಯನ್ನು ಹಾರೈಸಬೇಕು ಎಂದು ಕೋರಿದ್ದರು.
ನಿಖಿಲ್-ರೇವತಿ ಮದುವೆ ನಾಳೆ ರಾಮನಗರದ ಕೇತಗಾನಹಳ್ಳಿ ಬಳಿಯ ಫಾರ್ಮ್ ಹೌಸ್‌ನಲ್ಲಿ ನಡೆಯಲಿದೆ. ಕೋವಿಡ್-19 ಹರಡುವಿಕೆ ತಡೆಯುವ ಸಲುವಾಗಿ ಮೇ 3ರವರೆಗೆ ಸರ್ಕಾರ ಲಾಕ್‌ಡೌನ್ ವಿಸ್ತರಿಸಿದೆ.