ಬೆಂಗಳೂರು :ರೋಗಗ್ರಸ್ತ ನಿಗಮಗಳಿಂದ ಬಂಡವಾಳ ಹಿಂತೆಗೆದು ಪುನಶ್ಚೇತನಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಬಂಡವಾಳ ಹಿಂತೆಗೆತದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸುಳಿವು.. ಕಚೇರಿ ಪೂಜೆ ನೆರವೇರಿಸಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ರೋಗಗ್ರಸ್ತ ನಿಗಮಗಳನ್ನು ಯಾವ ರೀತಿ ಸುಧಾರಿಸಬೇಕು. ಪುನಶ್ಚೇತನಗೊಳಿಸಬೇಕು ಎಂಬ ಬಗ್ಗೆ ಕೇಂದ್ರ ಬಂಡವಾಳ ವಾಪಸಾತಿ ಇಲಾಖೆ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಮೊನ್ನೆ ದೆಹಲಿಗೆ ಹೋಗಿದ್ದಾಗ ಬಂಡವಾಳ ವಾಪಸಾತಿ ಇಲಾಖೆ ಅಧಿಕಾರಿಗಳ ಜತೆ ಮಾತನಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಮಾಲೋಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಹಲವು ನಷ್ಟದಲ್ಲಿರುವ ನಿಗಮಗಳನ್ನು ಪುನಶ್ಚೇತನಗೊಳಿಸಿದ್ದೇನೆ. ಕೇಂದ್ರ ಬಂಡವಾಳ ವಾಪಸಾತಿ ಇಲಾಖೆ ರೋಗಗ್ರಸ್ತ ನಿಗಮಗಳ ಬಗ್ಗೆ ಸರ್ವೇ ನಡೆಸಿ ವರದಿ ತಯಾರು ಮಾಡಿದೆ. ಅದರ ಆಧಾರದಲ್ಲಿ ನಷ್ಟದಲ್ಲಿರುವ ನಿಗಮಗಳ ಬಂಡವಾಳ ವಾಪಸಾತಿ, ಪುನಶ್ಚೇತನಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಜಾಗತಿಕ ಬಂಡವಾಳ ಸಮಾವೇಶ ಮುಂದೂಡುವ ಚಿಂತನೆ :ಫೆಬ್ರವರಿ 2022ಕ್ಕೆ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ 6 ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಮಾಡೋಕೆ ಆಗುತ್ತೋ, ಇಲ್ವೋ ಅನ್ನೋದರ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮೈಸೂರು ಲ್ಯಾಂಪ್ ಬಳಿ 21 ಎಕರೆ ಜಾಗವಿದೆ. ಅಲ್ಲಿ ಥೀಮ್ ಪಾರ್ಕ್ ಮಾಡೋಕೆ ತೀರ್ಮಾನ ಮಾಡಲಾಗಿದೆ. ಇದೇ 19ರಂದು ಭೂಮಿ ಪೂಜೆ ಮಾಡಲು ಚರ್ಚೆ ನಡೆಯುತ್ತಿದೆ. NGFನಲ್ಲಿ 500 ಎಕರೆ ಜಮೀನು ಇದೆ. ಅಲ್ಲಿ ಟ್ರೀ ಪಾರ್ಕ್ ಮಾಡಲಾಗುತ್ತದೆ ಎಂದರು.
ಅಧಿಕಾರಾವಧಿಯಲ್ಲಿ ನಾನಾ ಯೋಜನೆ ತಂದಿದ್ದೆ :2008-13ರವರೆಗೂ ಯಶಸ್ವಿಯಾಗಿ ಕೈಗಾರಿಕಾ ಇಲಾಖೆಯನ್ನು ನಿರ್ವಹಿಸಿದ್ದೆ. 2013ರಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ, ಸುಲಭವಾಗಿ ಉದ್ದಿಮೆದಾರರಿಗೆ ಭೂಮಿ ಸಿಗುವಂತೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕ್ ಆರಂಭ, 2008ರಲ್ಲಿ ಕೈಗಾರಿಕಾ ಅದಾಲತ್ ಈ ರೀತಿ ಹಲವು ವಿನೂತನ ಯೋಜನೆಗಳನ್ನು ಮಾಡಲಾಗಿತ್ತು. ಪದವೀಧರರಿಗೆ ತಾನೇ ಸ್ವತಃ ಉದ್ಯಮಿಯಾಗುವ ನಿಟ್ಟಿನಲ್ಲಿ ಟ್ರೈನಿಂಗ್ ಕೊಡಲಾಗಿತ್ತು. ಈಗ ಉಳಿದ 20 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಎಂದರು.
ಕೈಗಾರಿಕಾ ಪಾರ್ಕ್ ಮಾಡಲು ಚಿಂತನೆ :ರಾಜ್ಯ ಕೈಗಾರಿಕಾ ಇಲಾಖೆ ಜೊತೆ ಉತ್ತಮ ಸಂಬಂಧ ಹೊಂದುವ ನಿಟ್ಟಿನಲ್ಲಿ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಕೆಜಿಎಫ್‌ನಲ್ಲಿ 15 ಸಾವಿರ ಎಕರೆಗೂ ಹೆಚ್ಚು ಭೂಮಿ ಲಭ್ಯವಿದೆ. ಅತ್ಯಂತ ಹೆಚ್ಚು ಗೋಲ್ಡ್ ಸಿಕ್ತಿದ್ದ ಜಾಗ ಆಗಿತ್ತು. ಒಂದು ಟನ್ ಗಣಿಗಾರಿಕೆ ಮಾಡಿದರೆ 40 ಗ್ರಾಂ ಸಿಗುತ್ತಿತ್ತು.
ಈಗ ಗೋಲ್ಡ್ ಸಿಕ್ತಿಲ್ಲ. ಯಾವ ಜಾಗದಲ್ಲಿ ಗೋಲ್ಡ್ ಸಿಗಲ್ಲ, ಆ ಜಾಗದಲ್ಲಿ ಕೈಗಾರಿಕಾ ಪಾರ್ಕ್ ಮಾಡಲು ಚಿಂತನೆ ಇದೆ. 3,200 ಎಕರೆ ಪ್ರದೇಶದಲ್ಲಿ ಗೋಲ್ಡ್ ಇಲ್ಲ ಎಂಬ ವರದಿ ಕೊಟ್ಟಿದ್ದಾರೆ. ಆ ಜಾಗವನ್ನು ಕೈಗಾರಿಕಾ ಇಲಾಖೆಗೆ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ. ಕೈಗಾರಿಕೆ ಇಲಾಖೆಗೆ ಕೊಟ್ಟರೆ ಅನುಕೂಲ ಆಗುತ್ತದೆ ಎಂದರು.
ಖಾತೆಯಲ್ಲಿ ಡಮ್ಮಿ ಅನ್ನೋದು ಇಲ್ಲ :ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದ ಖಾತೆಯಲ್ಲಿ ಡಮ್ಮಿ ಅನ್ನೋದು ಇರಲ್ಲ. ಆನಂದ್ ಸಿಂಗ್, ಎಂಟಿಬಿ ಜೊತೆ ಸಿಎಂ ಮಾತನಾಡಿದ್ದಾರೆ. ಎಲ್ಲಾ ಬಗೆಹರಿದಿದೆ ಎಂದು ತಿಳಿಸಿದರು.
ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿಗೆ ಇಲ್ಲ ಮೀಸಲು ಅಧಿಕೃತ ಸರ್ಕಾರಿ ನಿವಾಸ
ಇನ್ನು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕ್ಯಾಂಟೀನ್ ಹೆಸರು ಬದಲಾಯಿಸೋದು ದೊಡ್ಡವರಿಗೆ ಬಿಟ್ಟಿದ್ದು ಎಂದರು.