ಬೆಂಗಳೂರು:ವಿವಿಧ ಸಂಘ ಸಂಸ್ಥೆಗಳು ಸಹ ತಮಗೆ ಸರ್ಕಾರದಿಂದ ಬರುತ್ತಿರುವ ಅನುದಾನ ಕಸ ಹೊಡೆಯಲೂ ಸಾಕಾಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಹಾಗಾಗಿ ಅನುದಾನ ಪರಿಷ್ಕರಣೆಗೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನಲ್ಲಿ ವಿವಿಧ ಟ್ರಸ್ಟ್ಗಳಿಗೆ ಅನುದಾನ ಮತ್ತು ಪ್ರಾಯೋಜಕತ್ವ ಸ್ಥಗಿತಗೊಳಿಸಲಾಗಿತ್ತು. ಬೇರೆ ಇಲಾಖೆಯಂತೆ ನಮಗೂ ಅನುದಾನ ಕಡಿಮೆ ಮಾಡಿದರೆ ಕಾರ್ಯ ಚಟುವಟಿಕೆ ಕುಂಠಿತವಾಗುತ್ತದೆ. ಈಗಿರುವ ಅನುದಾನವೇ ಕಡಿಮೆ ಇದೆ. ನಮ್ಮ ಇಲಾಖೆಯ ವಾರ್ಷಿಕ ಅನುದಾನ ಲೋಕೋಪಯೋಗಿ ಇಲಾಖೆಯ ಒಂದು ದಿನದ ಬಿಲ್ಗಿಂತಲೂ ಕಡಿಮೆ ಇದೆ. ಹೀಗಿರುವಾಗ ನಮಗೆ ಕಡಿಮೆ ಅನುದಾನದ ಬೇಡಿಕೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಅದು ಸಾಧ್ಯವಾಗುವುದಿಲ್ಲ ಎಂದರು.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು, ಕೆಲವು ಟ್ರಸ್ಟ್ಗಳನ್ನು ಲೆಟರ್ ಹೆಡ್ ಟ್ರಸ್ಟ್ಗಳೆಂದು ಹೇಳಿ ಅನುದಾನ ಕಡಿತಗೊಳಿಸಿದ್ದರು. ಅದನ್ನು ಸೋಷಿಯಲ್ ಆಡಿಟ್ ಮಾಡಿಸಲು ನಿರ್ಧರಿಸಿದ್ದೇವೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ನೊಂದಾಯಿಸಿಕೊಂಡ ಮೇಲೆ ಅನುದಾನ ಕೊಡದೆ ಇರುವುದು ಸರಿಯಲ್ಲ. ಶೇ. 30ರಷ್ಟು ಅನುದಾನ ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಕೇಂದ್ರದ ಅನುದಾನವು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ರಾಜ್ಯದ ಆದಾಯವೂ ಕಡಿಮೆಯಾಗಿದೆ. ಹಾಗಾಗಿ ವಿವಿಧ ಇಲಾಖೆಗಳ ಅನುದಾನ ಕಡಿತಗೊಳಿಸಲು ಸರ್ಕಾರ ಉದ್ದೇಶಿಸಿದೆ. ಈ ಸಂಬಂಧ ಫೆಬ್ರವರಿ 12 ರಂದು ಸಿಎಂ ಬಜೆಟ್ ಪೂರ್ವ ಸಮಾಲೋಚನಾ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಸಿಎಂ ಮನವೊಲಿಸುತ್ತೇವೆ. ಅಗತ್ಯವಾದರೆ ಸಾಹಿತಿಗಳು ಹಾಗೂ ಕಲಾವಿದರ ನಿಯೋಗವನ್ನು ಸಿಎಂ ಬಳಿಗೆ ಕರೆದೊಯ್ಯುತ್ತೇವೆ ಎಂದರು.