ಬೆಂಗಳೂರು :ಆಟೋ, ಟ್ರಕ್, ಬಸ್ ಸೇರಿದಂತೆ ಚಾಲಕರಿಗೆ ಅನುಕೂಲಕರ ವಿಧೇಯಕ ಮಂಡನೆಗೆ ಕಾರ್ಮಿಕ ಇಲಾಖೆ ಉದ್ದೇಶಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು. ಇಂದು ವಿಕಾಸಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ದೃಢ ಹೆಜ್ಜೆ ಇಡಬೇಕೆಂದು ನಿರ್ಧಾರ ಮಾಡಿದ್ದೇನೆ.
ಅತೀ ಶೀಘ್ರದಲ್ಲೇ ಹೊಸ ಬಿಲ್ ಮಂಡನೆ ಮಾಡಲಿದ್ದೇವೆ. ಆಟೋರಿಕ್ಷಾ, ಟ್ರಕ್, ಬಸ್ ಸೇರಿದಂತೆ ಎಲ್ಲಾ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಸಂಬಂಧಪಟ್ಟಂತೆ ಹೊಸ ಬಿಲ್ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು. ಚಾಲಕರು ಮೃತರಾದರೆ 5 ಲಕ್ಷ ರೂ. ಪರಿಹಾರ ನೀಡುವುದು ಸೇರಿ ಹಲವು ಚಾಲಕ ಸ್ನೇಹಿ ಸೌಲಭ್ಯಗಳು ಹೊಸ ಬಿಲ್ನಲ್ಲಿರಲಿವೆ.
ಬರುವ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡನೆ ಮಾಡಲಾಗುವುದು. ಒಂದು ಕಾಲಕ್ಕೆ ನಾನು ಚಾಲಕನಾಗಿ ಕೆಲಸ ಮಾಡಿದ್ದೇನೆ. ನನಗೆ ಚಾಲಕನ ಸಂಕಷ್ಟ ಗೊತ್ತಿದೆ. ಅದಕ್ಕಾಗಿ ಹೊಸ ಬಿಲ್ ತರಲಾಗುತ್ತಿದೆ ಎಂದರು.