ಬೆಂಗಳೂರು: ಮುಂಬರುವ ಯಾವುದೇ ಚುನಾವಣೆಯಲ್ಲಿ ಹೊಂದಾಣಿಕೆ ಅಥವಾ ವಿಲೀನದ ಪ್ರಶ್ನೆಯೇ ಇಲ್ಲ. ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಯುವ ಘಟಕಗಳ ಸಂಘಟನಾ ಸಭೆಗೂ ಮುನ್ನ ಮಾತನಾಡಿದ ಅವರು, 2023 ರ ಸಾರ್ವತ್ರಿಕ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುತ್ತೇವೆ ಎಂದರು. ಕಾಂಗ್ರೆಸ್, ಬಿಜೆಪಿ ಏನು ಎಂಬುದು ಗೊತ್ತಿದೆ. ಈ ಎರಡೂ ಪಕ್ಷಗಳು ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಪಕ್ಷದ ಅಸ್ತಿತ್ವವೇ ಮುಗಿದು ಹೋಯ್ತು ಅಂತಾ ಅಪಪ್ರಚಾರ ಮಾಡಲಾಗುತ್ತಿದೆ. ಯಾರೂ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಕಾಂಗ್ರೆಸ್ ಶಾಲ್ನಿಂದಲೇ ಜೆಡಿಎಸ್ನಲ್ಲಿ ಪ್ರಧಾನಿ, ಸಿಎಂ ಆಗಿದ್ದು ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾವೇನು ಅವರ ಬಳಿ ಅರ್ಜಿ ಹಾಕಿಕೊಂಡು ಹೋಗಿದ್ದೇವಾ?. ದೇವೇಗೌಡರು ಪ್ರಧಾನಿ ಮಾಡಿ ಅಂತಾ ಎಂದೂ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಹೋಗಿರಲಿಲ್ಲ. ದೇವೇಗೌಡರು ಕರ್ನಾಟಕ ಬಿಟ್ಟು ದೆಹಲಿಗೆ ಹೋಗೋದಿಲ್ಲ ಅಂದಿದ್ದರು. ಅವರೇ ದೇವೇಗೌಡರ ಮನೆ ಬಾಗಿಲಿಗೆ ಬಂದು ಗೋಗರೆದಿದ್ದರು. ಅವರೇ ಬೇಡಿಕೊಂಡು ನಮ್ಮ ಬಳಿಗೆ ಬಂದಿದ್ದರು ಎಂದು ತಿರುಗೇಟು ನೀಡಿದರು.
ನಾನು ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಶಾಲ್ ಬಗ್ಗೆ ಲೇವಡಿ ಮಾಡಿಲ್ಲ. ಆಗಿನ ಕಾಂಗ್ರೆಸ್ ಶಾಲ್ ಬಗ್ಗೆ ನನಗೆ ತುಂಬಾ ಗೌರವ ಇದೆ. ಈಗಿರುವ ಕಾಂಗ್ರೆಸ್ನ ಶಾಲ್ ಕುರಿತು ಮಾತನಾಡಿದ್ದೇನೆ. ಈಗಿರುವುದು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಶಾಲು. ಇವರಿಂದ ನಾನೇನು ಸಿಎಂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.