ಬೆಂಗಳೂರು: ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದೇನೆ. ಬೇಗನೆ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಡಿಯೋ ಮೂಲಕ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಅವರು, ಕಾರ್ಯಕರ್ತರು ಅಭಿಮಾನಿಗಳು ಹಾಗೂ ಪಕ್ಷದ ಹಿರಿಯ ನಾಯಕರಿಗೆ ಈ ಮೂಲಕ ಸಂದೇಶ ರವಾನಿದರು. ನನ್ನ ಆರೋಗ್ಯದ ಬಗ್ಗೆ ನೀವೆಲ್ಲ ಬಹಳ ಚಿಂತೆ ಮಾಡುತ್ತಿದ್ದೀರಿ. ಭೇಟಿಗಾಗಿ ಆಸ್ಪತ್ರೆ ಹೊರಗೆ ಕಾಯುತ್ತಿದ್ದೀರಿ. ಆದರೆ, ಕಾನೂನು ಹಾಗೂ ಆಸ್ಪತ್ರೆಯ ನಿರ್ಬಂಧ ಇರುವ ಹಿನ್ನೆಲೆ ನಾನು ಯಾರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯವರ ಜೊತೆ ತಾವೆಲ್ಲ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೊರೊನಾಗೆ ಚಿಕಿತ್ಸೆ ಪಡೆಯಲು ಆರಂಭಿಸಿ ಈಗಾಗಲೇ ಐದು ದಿನ ಕಳೆದಿದೆ. ಇನ್ನೂ ಮೂರ್ನಾಲ್ಕು ದಿನ ಮುಂದುವರೆಯುತ್ತದೆ. ಇನ್ನೂ ಒಂದು ದಿನದ ಚಿಕಿತ್ಸೆ ಅಗತ್ಯವಿದ್ದು, ನಂತರ ಎರಡು, ಮೂರು ದಿನ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಆದಷ್ಟು ಬೇಗ ನಿಮ್ಮ ಸೇವೆಗೆ ವಾಪಸ್ ಮರಳುತ್ತೇನೆ ಎಂಬ ನಂಬಿಕೆ ಇದೆ. ಆದ್ದರಿಂದ ತಾವೆಲ್ಲಾ ಸಹಕರಿಸಬೇಕು. ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ನನಗೆ ದೂರವಾಣಿ ಕರೆಮಾಡಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾನು ಯಾರ ಕರೆಯನ್ನೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಹೆಚ್ಚು ಮಾತನಾಡಿದರೆ ನನಗೆ ಒತ್ತಡ ಉಂಟಾಗುತ್ತದೆ ಎಂದರು.
ಈ ನಡುವೆಯೂ ಆನ್ಲೈನ್ ಮೂಲಕ ಕೆಲ ಶಾಸಕರ ಜೊತೆ ಸಂವಾದ ಕೂಡ ಮಾಡಿದ್ದೇನೆ ಎಂದರು.