ಬೆಂಗಳೂರು: ನಾಗ್ಪುರದಲ್ಲಿ ಲಾಕ್‌ಡೌನ್ ಮಾಡಿರುವುದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಗಮನಿಸಿದ್ದೇವೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಮಾಣ ತಡೆಯುವ ಸಂಬಂಧ ಮುಖ್ಯಮಂತ್ರಿ ಬಿಎಸ್ವೈ ಅವರು ಸಚಿವರ ಹಾಗೂ ವಲಯ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಕೊರೊನಾ ಸಂಬಂಧ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ನಾಳಿನ ಸಭೆಯಲ್ಲಿ ಮತ್ತಷ್ಟು ಕಠಿಣ ನಿಯಮ ಬಗ್ಗೆ ಅಭಿಪ್ರಾಯವ್ಯಕ್ತವಾಗುವ ಸಾಧ್ಯತೆಯಿದೆ. ಸಚಿವರಿಂದ ಅಭಿಪ್ರಾಯ ಪಡೆದು, ಅದನ್ನು ಜಾರಿಗೊಳಿಸುವ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ ಎಂದರು.
ನಾಲ್ಕು ವಾರಗಳಿಂದ 300 ಕೊರೊನಾ ಕೇಸ್ ಪತ್ತೆಯಾಗುತ್ತಿವೆ. ಈಗ ಮೂರು ಸಾವಿರ ಬರ್ತಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ಹೆಚ್ಚು ಗಮನವಿರಿಸಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಸಿಎಂ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.