ಬೆಂಗಳೂರು: ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ದಿಸೆಯಲ್ಲಿ ಕರ್ನಾಟಕಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದ್ರ ಜೊತೆಗೆ ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಸಮನ್ವಯತೆಯಿಂದ ಜನರ ಬದುಕಿನ ಮಟ್ಟ ಸುಧಾರಿಸಲು ಮೋದಿ ನೇತೃತ್ವದ ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.
ರಾಜ್ಯದ ಐಟಿ/ಬಿಟಿ ಮತ್ತು ವಿಜ್ಞಾನ & ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಪ್ರಮುಖರೊಂದಿಗೆ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿಯ ಜೈವಿಕ ತಂತ್ರಜ್ಞಾನ ಪಾರ್ಕ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾವುದೇ ವೈಜ್ಞಾನಿಕ ಸಾಧನೆಗೆ ಜೀವ ವಿಜ್ಞಾನಗಳೇ ಬುನಾದಿ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಜೀವ ವಿಜ್ಞಾನ ಹಾಗೂ ಜೈವಿಕ ತಾಂತ್ರಿಕತೆಯ ಬೆಳವಣಿಗೆಗೆ ದೇಶದಲ್ಲೇ ಮಾದರಿ ಎನ್ನಿಸುವಂತಹ ವಾತಾವರಣ ಸೃಷ್ಟಿಸಿದೆ ಎಂದರು.
ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ: ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳ ನಡುವೆ ಸಮನ್ವಯತೆ ಉಂಟುಮಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇದೇ ವೇಳೆ, ಯಾವುದೇ ಅಭಿಪ್ರಾಯ, ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.
ಐಟಿ/ಬಿಟಿ ಸಚಿವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಕರ್ನಾಟಕವು ಮಾಹಿತಿ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನದ ತವರೂ ಆಗಿದೆ. ಕಿಣ್ವಗಳು (ಎಂನ್ಸೆಮ್ಸ್), ಬಯೋಫಾರ್ಮಾ, ಬಯೋಫಾರ್ಮಸ್ಯೂಟಿಕಲ್, ಸಸ್ಯ ಆನುವಂಶೀಯತೆ, ವಂಶವಾಹಿನಿಗಳ ಅನುಕ್ರಮಣಿಕೆ, ಜೈವಿಕ ಸಂಸ್ಕರಣೆಗೆ ಸಂಬಂಧಿಸಿದ ಆವಿಷ್ಕಾರಗಳಿಗೆ ಬೆಂಗಳೂರು ಪ್ರಮುಖ ಕಾರ್ಯನೆಲೆಯಾಗಿದೆ ಎಂದರು.