ಕರ್ನಾಟಕ

karnataka

ETV Bharat / state

ಅಗ್ರಿಗೋಲ್ಡ್ ನಿರ್ದೇಶಕರ ಆಸ್ತಿ ಜಪ್ತಿ ಮಾಡುತ್ತೇವೆ : ಗೃಹ ಸಚಿವರ ಭರವಸೆ - ಅಗ್ರಿಗೋಲ್ಡ್ ನಿರ್ದೇಶಕರ ಆಸ್ತಿ ಜಪ್ತಿ ಮಾಡುತ್ತೇವೆ ಗೃಹ ಸಚಿವರ ಹೇಳಿಕೆ

ಅಗ್ರಿಗೋಲ್ಡ್ ನಿರ್ದೇಶಕರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಣ ವಾಪಸ್​ ಕೊಡಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸಭೆಯಲ್ಲಿ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ರುದ್ರಪ್ಪ ಅವರ ಪ್ರಶ್ನೆಗೆ ಗೃಹ ಸಚಿವರು ಈ ಉತ್ತರ ನೀಡಿದ್ದಾರೆ.

Assembly Session
ವಿಧಾನಸಭೆ ಕಲಾಪ

By

Published : Mar 19, 2020, 9:50 PM IST

ಬೆಂಗಳೂರು :ಅಗ್ರಿಗೋಲ್ಡ್ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್​ ಕೊಡಿಸಲು ಸಂಸ್ಥೆಯ ನಿರ್ದೇಶಕರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ರುದ್ರಪ್ಪ, 2014-15 ರಲ್ಲಿ ಅಗ್ರಿಗೋಲ್ಡ್ ಹಗರಣ ನಡೆದಿದೆ. 84,616 ಮಂದಿ ಠೇವಣಿದಾರರು, 1500 ಕೋಟಿ ರೂ.ಗೂ ಹೆಚ್ಚಿನ ಹಣ ಠೇವಣಿ ಮಾಡಿದ್ದಾರೆ. ಅಗ್ರಿಗೋಲ್ಡ್ ಮಾಲೀಕರು ಆಂಧ್ರಪ್ರದೇಶ, ತೆಲಂಗಾಣದಲ್ಲಿ 16 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಹೊಂದಿದ್ದಾರೆ. ಬೆಂಗಳೂರಿನಲ್ಲೇ 250 ಎಕರೆ ಭೂಮಿ ಅವರ ಹೆಸರಿನಲ್ಲಿದೆ. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿದಾರರಿಗೆ ನಷ್ಟದ ಪರಿಹಾರ ಕೊಡಿಸುವ ಪ್ರಾಮಾಣಿಕ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ. ಠೇವಣಿ ಸಂಗ್ರಹಿಸಲು ಕೆಲಸ ಮಾಡಿದ 170 ಮಂದಿ ಸಿಬ್ಬಂದಿ, ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪ

ಇದಕ್ಕೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಗ್ರಿಗೋಲ್ಡ್ ಸಂಸ್ಥೆ ಸಾರ್ವಜನಿಕರಿಂದ ಏಜೆಂಟರ ಮೂಲಕ ಠೇವಣಿ ಸಂಗ್ರಹ ಮಾಡಿ ಪ್ರತಿಯಾಗಿ ಠೇವಣಿದಾರರಿಗೆ ಲಾಭಾಂಶ ಅಥವಾ ಬಡ್ಡಿ ಯಾವುದನ್ನೂ ಕೊಟ್ಟಿಲ್ಲ. ನೂರಾರು ಜನ ಈಗಲೂ ಅಲೆದಾಡುತ್ತಿದ್ದಾರೆ. ಕೇಸು ದಾಖಲಾಗಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. 1,500 ಕೋಟಿ ರೂ.ಗಳ ಠೇವಣಿಯನ್ನು ವೈಯಕ್ತಿಕ ಖಾತೆಗೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂಸ್ಥೆಯ ಮಾಲೀಕರು ಹಾಗೂ ನಿರ್ದೇಶಕರ ಆಸ್ತಿಗಳನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಣ ವಾಪಾಸ್‍ ಕೊಡಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಇನ್ನು ಶಾಸಕ ಉಮಾನಾಥ್ ಕೊಟ್ಯಾನ್ ವಿಷಯ ಪ್ರಸ್ತಾಪಿಸಿ, ಮಾ.7 ರಂದು ಸುಹಾನ್ ಎಂಬ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕುಂದಾಪುರದಿಂದ ಬೆಂಗಳೂರಿಗೆ ಬರುವ ದುರ್ಗಾಂಬ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಕಲೇಶಪುರ ಬಳಿ ಬರುತ್ತಿದ್ದಂತೆ ಆತನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆತ ತಕ್ಷಣ ನಿರ್ವಾಹಕರಿಗೆ ವಿಷಯ ತಿಳಿಸುತ್ತಾನೆ. ಆದರೆ, ನಿಗದಿತ ಸಮಯಕ್ಕೆ ಬೆಂಗಳೂರು ತಲುಪುವ ಪೈಪೋಟಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಬಸ್ ನಿಲ್ಲಿಸುವುದಿಲ್ಲ. ಇನ್ನು ಸ್ವಲ್ಪ ದೂರ ಬಂದಾಗ ಎದೆ ನೋವು ಜೋರಾಗುತ್ತದೆ. ಆಗಲೂ ಬಸ್ ನಿಲ್ಲಿಸುವಂತೆ ಯುವಕ ಮನವಿ ಮಾಡಿಕೊಳ್ಳುತ್ತಾನೆ. ಆದರೆ, ಸಿಬ್ಬಂದಿ ಕೇಳುವುದಿಲ್ಲ. ಕೊನೆಗೆ ಮಾರ್ಗ ಮಧ್ಯದಲ್ಲೇ ಯುವಕ ಬಸ್‍ನಲ್ಲೇ ಪ್ರಾಣ ಕಳೆದುಕೊಳ್ಳುತ್ತಾನೆ. ಯುವಕನ ತಾಯಿಯ ರೋಧನೆ ಕೇಳಲಾಗುತ್ತಿಲ್ಲ. ಖಾಸಗಿ ಬಸ್‍ಗಳು ವೇಗದ ಪೈಪೋಟಿಗಿಳಿದು ಮಧು ಮೇಹಿಗಳು ಮೂತ್ರ ವಿಸರ್ಜನೆ ಮಾಡಬೇಕೆಂದರೂ ಬಸ್ ನಿಲ್ಲಿಸುತ್ತಿಲ್ಲ. ಈ ರೀತಿಯ ಖಾಸಗಿ ಬಸ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬಸ್ ನಿಲ್ಲಿಸದೇ ಯುವಕನ ಪ್ರಾಣ ಹಾನಿಗೆ ಕಾರಣರಾಗಿದ್ದರೆ ಅದು ಅಪರಾಧ. ಸಾರಿಗೆ ಸಚಿವರಿಂದ ಪ್ರಕರಣದ ಬಗ್ಗೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ABOUT THE AUTHOR

...view details