ಬೆಂಗಳೂರು:ಕಾಂಗ್ರೆಸ್ ಪಕ್ಷ ಅಕ್ರಮಗಳ ಗಂಗೋತ್ರಿಯಾಗಿದ್ದು, ಅವರ ಅವಧಿಯಲ್ಲಿನ ಸಾಲು ಸಾಲು ನೇಮಕಾತಿ ಅಕ್ರಮಗಳನ್ನು ಬಹಿರಂಗ ಪಡಿಸುತ್ತೇವೆ ಎಂದು ಬಿಜೆಪಿ ಶಾಸಕ ಪಿ ರಾಜೀವ್ ತಿಳಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ನೇಮಕಾತಿಯಲ್ಲಿ ಅಕ್ರಮ: ವಿಧಾನಸೌಧಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಎಂ ಡಿ ಲಕ್ಷ್ಮೀನಾರಾಯಣ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಎರಡಲ್ಲ ಸಾಲು ಸಾಲಾಗಿ ಕಾಂಗ್ರೆಸ್ ಅವಧಿಯಲ್ಲಿ ನೇಮಕಾತಿಯಲ್ಲಿ ಅಕ್ರಮ ಆಗಿದೆ. ಅದನ್ನು ಇತಿಹಾಸದಲ್ಲಿ ಮುರಿಯಲು ಯಾರಿಂದಲೂ ಅಸಾಧ್ಯ.
ಅವರ ಕಾಲದಲ್ಲಿ ನಡೆದ ಶಿಕ್ಷರ ನೇಮಕಾತಿಯಲ್ಲಿ ಪರೀಕ್ಷೆಯನ್ನೇ ಬರೆದಿಲ್ಲ. ಆದರೆ, ಅವರಿಗೆ ನೇಮಕಾತಿ ಪತ್ರ ಕೊಡಲಾಗಿದೆ. ಶಿಕ್ಷಣ ಸಚಿವ ನಾಗೇಶ್ ಆ ಅಕ್ರಮದ ಬಗ್ಗೆ ಸುಳಿವು ಸಿಗುತ್ತಾ ಇದ್ದ ಹಾಗೆ ವಿವರ ಪಡೆದರು. ಬಳಿಕ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು. ಈ ಸಂಬಂಧ 30ಕ್ಕೂ ಹೆಚ್ಚು ಉಪನ್ಯಾಸಕರನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ರಮ ನೇಮಕಾತಿ ಬಗ್ಗೆ ತನಿಖೆ: ಪ್ರತಿಭಾವಂತರಿಗೆ ಅತಿಹೆಚ್ಚು ಅನ್ಯಾಯವಾಗಿರುವುದು ಕಾಂಗ್ರೆಸ್ ಅವಧಿಯಲ್ಲಿ. ಎಸ್ ಐ ಅಕ್ರಮ ಬೆಳಕಿಗೆ ಬಂದಾಕ್ಷಣ ಬಿಜೆಪಿ ಸರ್ಕಾರ ಪಾರದರ್ಶಕ ತನಿಖೆ ನಡೆಸಿದೆ. ಎಡಿಜಿಪಿಯವರನ್ನೇ ಬಂಧನ ಮಾಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಅಕ್ರಮ ನೇಮಕಾತಿ ಆಗಿದೆ ಎಂಬುದರ ಬಗ್ಗೆ ಬಹಿರಂಗ ಪಡಿಸಲಾಗುತ್ತದೆ.
ಅರ್ಹರಿಗೆ ಪ್ರತಿಭಾವಂತರಿಗೆ ಹಿಂದೆ ನಡೆದ ಅನ್ಯಾಯವನ್ನು ಬಿಜೆಪಿ ಸರ್ಕಾರ ಮರುಕಳಿಸಲು ಬಿಡುವುದಿಲ್ಲ. ಈ ಹಿಂದಿನ ಅಕ್ರಮ ನೇಮಕಾತಿ ಬಗ್ಗೆ ತನಿಖೆ ಮಾಡಲು ಬದ್ಧವಾಗಿದೆ ಎಂದರು.
ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮ:ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಭ್ರಷ್ಟಾಚಾರ ಅಂದರೆ ಕಾಂಗ್ರೆಸ್. 2012-13 ಪ್ರೌಢಶಾಲೆ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ 3407 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. 2014-15ರಲ್ಲಿ 1,689 ಹುದ್ದೆ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ನೇಮಕಾತಿಯಲ್ಲಿ ಮೆರಿಟ್ ಬರದವರನ್ನೂ ನೇಮಕ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಪ್ರತಿಭಟಸಿರುವ ಕಾಂಗ್ರೆಸ್ ಧ್ವಜ ಸಂಹಿತೆ ಉಲ್ಲಂಘಿಸಿದೆ : ಪಿ.ರಾಜೀವ್
ಪರೀಕ್ಷೆ ಬರೆಯದವರನ್ನೂ ಕೂಡ ನೇಮಕ ಮಾಡಲಾಗಿದೆ. 5.7.2022 ಈ ಪ್ರಕರಣ ಬೆಳಕಿಗೆ ಬಂತು. ಈ ಸಂಬಂಧ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯನ್ನು ಬಂಧಿಸಲಾಗಿದೆ. 12ಸಹ ಶಿಕ್ಷಕರನ್ನು ಬಂಧಿಸಲಾಗಿದೆ. 2014-15ರಲ್ಲಿ ಪ್ರಕಟಿಸಲಾದ ಹೆಚ್ಚುವರಿ ಆಯ್ಕೆ ಅಂತಿಮ ಪಟ್ಟಿಯಲ್ಲಿ ಹೆಸರಿಲ್ಲದವರನ್ನೂ ನೇಮಕ ಮಾಡಲಾಗಿದೆ. ಕನಿಷ್ಠ ಅಂಕವನ್ನೂ ಪಡೆಯದವರನ್ನು ಆಯ್ಕೆ ಮಾಡಲಾಗಿದೆ. ನಕಲಿ ದಾಖಲೆ, ಅಧಿಕಾರ ದುರ್ಬಳಕೆ, ಅಧಿಸೂಚನೆಯನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಕೆಂಪಣ್ಣ ಕಾಂಗ್ರೆಸ್ ಏಜೆಂಟ್:ಈ ಅಕ್ರಮಗಳ ಪ್ರಾಯಶ್ಚಿತ್ತವಾಗಿ ನೀವು ಏನು ಮಾಡುತ್ತೀರಿ?. ಡಿಕೆಶಿಯಂಥ ಪ್ರಾಮಾಣಿಕರು ಈ ಜಗತ್ತಿನಲ್ಲೇ ಇಲ್ಲ. ಅವರನ್ನು ಅಪ್ರಮಾಣಿಕನೆಂದು ಕರೆಯಲು ಸಾಧ್ಯವೇ ಇಲ್ಲ. ಶೇ 40ರಷ್ಟು ಕಮಿಷನ್ ಹೇಳಿನೇ ಚುನಾವಣೆ ಎದುರಿಸಲು ಹೋಗಿದ್ದಾರೆ. ಜನ ಕಪಾಳ ಮೋಕ್ಷ ಮಾಡುತ್ತಾರೆ. ಗುತ್ತಿಗೆದಾರ ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲೇ ಅವರನ್ನು ಕೂರಿಸಿ ಸುದ್ದಿಗೋಷ್ಠಿ ಮಾಡಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಎಸ್ವೈ ಮೇಲಿನ ಆರೋಪ ಕಾಂಗ್ರೆಸ್ನ ಪಿತೂರಿಯಾಗಿದೆ. ಕೋರ್ಟ್ಗೆ ಹೋಗಿರುವುದು ಎಲ್ಲವೂ ಕಾಂಗ್ರೆಸ್ ಪಿತೂರಿಯಾಗಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಸಿದ್ದರಾಮಯ್ಯ ವಾಚ್ ಏನು, ಸಿದ್ದರಾಮಯ್ಯ ರ ಬಂಗಲೆ ಏನು, ಸಿದ್ದರಾಮಯ್ಯರ ಕಾರು ಏನು? ಎಂಬ ಬಗ್ಗೆ ಸಾರ್ವಜನಿಕರ ಮುಂದೆ ಚರ್ಚೆ ಆಗಲಿ ಎಂದು ತಿಳಿಸಿದರು.