ಬೆಂಗಳೂರು: ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಾನು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಜೆ ಪಿ ನಗರದಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಸುಳ್ಳು ಭರವಸೆ ಕೊಟ್ಟು ದ್ರೋಹ ಮಾಡಿದ್ದಾರೆ. ಅವರು ನುಡಿದಂತೆ ಗ್ಯಾರಂಟಿಗಳನ್ನು ಕೊಡಲಿ. ಉಚಿತ ಗ್ಯಾರಂಟಿ ಕೊಡೋವರೆಗೂ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದರು.
ರಾಜ್ಯಪಾಲರ ಭಾಷಣದ ಬಳಿಕ ಸತ್ಯಾಗ್ರಹ ಮಾಡ್ತೇವೆ -ಬಿಎಸ್ವೈ:ವಿಧಾನಸೌಧದಲ್ಲಿ ಹೋರಾಟ ಮಾಡ್ತೀವಿ. ಗ್ಯಾರಂಟಿಗಳನ್ನು ಕೊಡೋವರೆಗೂ ನಾವು ಸತ್ಯಾಗ್ರಹ ಮಾಡ್ತೇವೆ. ಅಧಿವೇಶನದ ಒಳಗೆ ನಮ್ಮ ಶಾಸಕರಿಂದ ಹೋರಾಟ. ಗಾಂಧಿ ಪ್ರತಿಮೆ ಬಳಿ ನಾನು ನಮ್ಮ ಮುಖಂಡರ ಜತೆ ಸತ್ಯಾಗ್ರಹ ಮಾಡ್ತೇನೆ. ನಮ್ಮ ಕಾಂಗ್ರೆಸ್ನ ಸ್ನೇಹಿತರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ರು. 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ಕೊಡ್ತೇವೆ ಅಂದ್ರು. ಆದ್ರೆ ಷರತ್ತುಗಳನ್ನು ಹಾಕ್ತಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ಸಾವಿರಾರು ಕಾರ್ಯಕರ್ತರ ಜೊತೆ ಅಧಿವೇಶನ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಸತ್ಯಾಗ್ರಹ ಮಾಡ್ತೇವೆ ಎಂದು ಬಿಎಸ್ವೈ ಎಚ್ಚರಿಕೆ ರವಾನಿಸಿದರು.
ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲು ಅವರು ಮನೆ ಮನೆಗೆ ಹೋಗಿ ಕೊಟ್ಟ ಗ್ಯಾರಂಟಿ ಕಾರ್ಡ್ ಕಾರಣ. ಜನ ಅದನ್ನು ನಂಬಿ ಬಿಟ್ಟರು, ಬಿಜೆಪಿ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ, ಮತ್ತೊಮ್ಮೆ ಎದ್ದೇಳಬೇಕಾಗಿದೆ. ಸುಳ್ಳು ಭರವಸೆಗಳ ವಿರುದ್ಧ ಆಂದೋಲನ ಮಾಡಬೇಕಾಗಿದೆ. ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಗಬೇಕು ಅಂತಾ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಬಣ್ಣ ಬಯಲು ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.