ಬೆಂಗಳೂರು: ಕೊರೊನಾ ರೋಗಿಗೆ ಪ್ಲಾಸ್ಮಾ ಥೆರಪಿ ನೀಡುವ ರಾಜ್ಯದ ಮೊದಲ ಪ್ರಯತ್ನ ವಿಫಲವಾದರೂ ಮುಂದೆ ಯಶಸ್ವಿಯಾಗಲಿದ್ದೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಯಾವ ಪ್ರಯತ್ನದಲ್ಲೇ ಆಗಲಿ ಟ್ರಯಲ್ ಅಂಡ್ ಎರರ್ ಸಹಜ, ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.
ಡಿಸಿಎಂ ಅಶ್ವತ್ಥ್ ನಾರಾಯಣ್ ಗಂಭೀರ ಸಮಸ್ಯೆ ಇದ್ದ ರೋಗಿಗೆ ಕೊನೆಯ ಪ್ರಯತ್ನವಾಗಿ ಪ್ಲಾಸ್ಮಾ ಥೆರಪಿ ನೀಡುವ ಪ್ರಯೋಗ ನಡೆಸಲಾಯಿತು. ಆದರೆ ರೋಗಿಯ ಆರೋಗ್ಯ ಸಮಸ್ಯೆ ಕಾರಣಕ್ಕೆ ಮೃತಪಟ್ಟಿದ್ದಾರೆ. ನಮ್ಮ ಪ್ರಯೋಗ ನಿಲ್ಲುವುದಿಲ್ಲ. ವಿಶ್ವದಲ್ಲಿ ಮೂರು ಕಡೆ ಮಾತ್ರ ಇಂತಹ ಪ್ರಯೋಗ ನಡೆಸಲಾಗುತ್ತಿದೆ. ಅದರಲ್ಲಿ ಬೆಂಗಳೂರು ಕೂಡ ಒಂದು.
ನಮ್ಮ ಪ್ರಯತ್ನ ಹುಸಿಯಾಗಲ್ಲ. ಸದ್ಯದಲ್ಲೇ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸಫಲತೆಯ ವಿಶ್ವಾಸ ವ್ಯಕ್ತಪಡಿಸಿದರು. ಒಂದು ಕಡೆ ಪ್ಲಾಸ್ಮಾ ಪ್ರಯೋಗ, ಮತ್ತೊಂದು ಕಡೆ ಆಯುರ್ವೇದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಕೇವಲ ವೈದ್ಯರು ಮಾತ್ರ ಪ್ರಯೋಗ ಮಾಡುತ್ತಿಲ್ಲ, ವಿಜ್ಞಾನಿಗಳು ಕೂಡ ಸಂಶೋಧನೆ ನಡೆಸುತ್ತಿದ್ದಾರೆ. ಯಾರೇ ಪ್ರಯೋಗಕ್ಕೆ ಮುಂದಾದರೂ ಸ್ವಾಗತ ಮಾಡಲಿದ್ದೇವೆ ಎಂದು ಮತ್ತಷ್ಟು ಪ್ರಯೋಗಗಳಿಗೆ ಪ್ರೋತ್ಸಾಹ ನೀಡಿದರು.
ಇನ್ನು ಲಾಕ್ಡೌನ್ ಮತ್ತಷ್ಟು ಸಡಿಲಿಕೆ ಕುರಿತು ಕೇಂದ್ರದ ನಿರ್ಧಾರದ ಮೇಲೆ ರಾಜ್ಯ ಕ್ರಮ ಕೈಗೊಳ್ಳಲಿದೆ. ಎರಡು ಮೂರು ದಿನದಲ್ಲಿ ಇದೆಲ್ಲಾ ಸ್ಪಷ್ಟವಾಗಲಿದೆ ಎಂದರು.