ಬೆಂಗಳೂರು: ಬಿಟ್ ಕಾಯಿನ್ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯದಮವರೊಂದದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ಹಿಂದಿನ ಸರ್ಕಾರ ತನಿಖೆಯನ್ನು ಮುಕ್ತಾಯಗೊಳಿಸಿದೆ. ನಾವು ಮರು ತನಿಖೆ ಮಾಡುತ್ತೇವೆ. ಸಿಐಡಿಗೆ ಕೊಡಬೇಕೋ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಸದ್ಯ ಸಿಐಡಿ ಪ್ರಬಲವಾಗಿದೆ. ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಸಿಐಡಿಗೆ ಕೊಡಿಸಲಾಗುವುದು. ಎರಡು ಬಾರಿ ಬಿಟ್ ಕಾಯಿನ್ ಹಗರಣ ಸಂಬಂಧ ಸಭೆ ಮಾಡಿದ್ದೇನೆ. ಟೆಕ್ನಿಕಲ್ ಆಗಿ ಯಾರಿಗೆಲ್ಲ ಹಣ ಹೋಗಿದೆ. ಕಾನೂನು ಬಾಹಿರವಾಗಿ ಸಾವಿರಾರು ಕೋಟಿ ಹಣ ವರ್ಗಾವಣೆಯಾಗಿದೆ. ಕೆಲವೊಂದು ವಿಚಾರಗಳನ್ನು ಹೇಳಲು ಆಗಲ್ಲ. ಹಗರಣದ ಬಗ್ಗೆ ಬೆಳಕು ಚೆಲ್ಲುತ್ತೇವೆ. ಸಿಐಡಿಗೆ ಕೊಡೋ ಬಗ್ಗೆ ತೀರ್ಮಾನ ಮಾಡಬೇಕಾಗಿದೆ ಎಂದು ಹೇಳಿದರು.
ಸುಳ್ಳು ಸುದ್ದಿ ಹರಡದಂತೆ ಸೂಕ್ತ ಕಾನೂನು:ಫೇಕ್ ನ್ಯೂಸ್ ಹರಡುವುದರಲ್ಲಿ ಕೆಲವರು ನಿರತರಾಗಿದ್ದಾರೆ. ಅದು ರಾಜಕೀಯ ಇರಬಹುದು ಅಥವಾ ಸಮಾಜದ ಶಾಂತಿ ಕದಡುವ ವಿಚಾರ ಇರಬಹುದು. ಸುಳ್ಳು ಸುದ್ದಿಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದನ್ನು ಗಮನಿಸಿದ್ದೇವೆ. ಸಂಬಂಧವೇ ಇಲ್ಲದ ಫೋಟೋಗಳನ್ನು ಹಾಕಿ ಸಂಬಂಧ ಕಲ್ಪಿಸುವುದು ನಡೆಯುತ್ತಿದೆ. ಸರ್ಕಾರ ರಚನೆ ಆದಮೇಲೆ ಫೇಕ್ ನ್ಯೂಸ್ ಗಮನಿಸಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನು ನಿಲ್ಲಿಸದಿದ್ದರೆ ಬಹಳಷ್ಟು ಸಮಸ್ಯೆ ಆಗಲಿದೆ. ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಸೈಬರ್ ಲಾ ನಲ್ಲಿ ಅಮೆಂಡ್ಮೆಂಟ್ ಮಾಡಬೇಕಾಗುತ್ತದೆ. ಸೈಬರ್ ಲಾ ನಲ್ಲಿ ಅವಕಾಶ ಇದ್ರೆ ಕ್ರಮ ಕೈಗೊಳ್ಳುತ್ತೇವೆ. ಆರ್ಟಿಫಿಶಿಯಲ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸುಳ್ಳು ಸುದ್ದಿ ಹರಡುವವರ ಮೇಲೆ ಶಿಕ್ಷೆಗೆ ಸೂಕ್ತ ಕಾನೂನು ಕೂಡ ತರುತ್ತೇವೆ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆಯೋ ಅವುಗಳನ್ನು ತನಿಖೆ ಮಾಡಿಸುತ್ತೇವೆ. ಇದೇ ಮಾತನ್ನು ಸಿಎಂ ಕೂಡ ಹೇಳಿದ್ದಾರೆ. ಪಿಎಸ್ಐ ಪ್ರಕರಣ ಸಂಬಂಧ ಕೋರ್ಟ್ ಜಡ್ಡ್ ಮೆಂಟ್ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಕರ್ತವ್ಯ ಲೋಪ ಆರೋಪದಡಿ ಅಶೋಕನಗರ ಠಾಣೆಯ ಇನ್ಸ್ಪೆಕ್ಟರ್ ಅಮಾನತು
ಬಿಟ್ ಕಾಯಿನ್ ಪ್ರಕರಣದ ಉನ್ನತ ತನಿಖೆಗೆ ಡಿಜಿ ಮತ್ತು ಐಜಿಪಿಗೆ ಮನವಿ:ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಪ್ರಕರಣವನ್ನ ಉನ್ನತಮಟ್ಟದ ತನಿಖೆಗೊಳಪಡಿಸುವಂತೆ ರಾಜ್ಯ ಡಿಜಿ & ಐಜಿಪಿ ಅಲೋಕ್ ಮೋಹನ್ರಿಗೆ ಬೆಂಗಳೂರು ಪೊಲೀಸ್ ಇಲಾಖೆ ಪತ್ರ ಬರೆದಿದೆ. ಹಗರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಂಚನೆ ಜಾಲವಿರುವ ಸಂಶಯ ಹಾಗೂ ಪರಿಣಿತ ವಿಧಿ ವಿಧಾನಗಳಿಂದ ಕೃತ್ಯ ಎಸಗಿರುವುದರಿಂದ ಪ್ರಕರಣದ ತನಿಖೆಯನ್ನ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, 'ಪ್ರಕರಣದಲ್ಲಿ ಈಗಾಗಲೇ ತನಿಖೆಯಾಗಿ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿರುವುದು ಒಂದು ಹಂತ. ಆದರೆ, ಇದರಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ಸ್ ಪಾತ್ರವಿದೆ. ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಸಹ ಹ್ಯಾಕ್ ಮಾಡಲಾಗಿದೆ. ಆದ್ದರಿಂದ ಹೆಚ್ಚಿನ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದೇವೆ. ಯಾರಿಂದ ತನಿಖೆಯಾಗಬೇಕು ಎಂಬುದು ಸರ್ಕಾರ ಮತ್ತು ಡಿಜಿ & ಐಜಿಪಿ ಅವರ ಮಟ್ಟದಲ್ಲಿ ನಿರ್ಧಾರವಾಗಲಿದೆ' ಎಂದರು.