ಬೆಂಗಳೂರು :ಕೋಲಾರ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ದೃಷ್ಟಿಯಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜೆಡಿಎಸ್ ಸಚೇತಕ ಗೋವಿಂದರಾಜು ಅಭಿಪ್ರಾಯ ಪಟ್ಟಿದ್ದಾರೆ. ನಿಯಮ 72 ರ ಅಡಿ ಗಮನ ಸೆಳೆಯುವ ಸೂಚನೆ ಅಡಿ ಕೋಲಾರ ಜಿಲ್ಲಾ ಆಸ್ಪತ್ರೆ ದುಃಸ್ಥಿತಿ, ಅವ್ಯವಸ್ಥೆ, ಸಿಬ್ಬಂದಿ ಕೊರತೆ ವಿಚಾರವಾಗಿ ನಡೆಸಿದ ಚರ್ಚೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೀಡಿದ ಉತ್ತರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಸಚಿವರ ಜತೆ ಸಾಕಷ್ಟು ಸಾರಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಪ್ರಯೋಜನ ಆಗಿಲ್ಲ. ಸರ್ಕಾರ ನೀಡಿದ ಉತ್ತರ ಸರಿ ಇಲ್ಲ. ಸಮಾಧಾನಕರ ಉತ್ತರ ಇದಲ್ಲ. ಇಲ್ಲಿರುವ ಉತ್ತರ ಅಲ್ಲಿರುವ ಸ್ಥಿತಿ ಅಜಗಜಾಂತರ. 18 ಮಂದಿ ಮಾತ್ರ ನುರಿತ ತಜ್ಞರಿದ್ದಾರೆ.
ದೋಷಪೂರಿತ ಮಾಹಿತಿ ಇದಾಗಿದೆ:ಐಸಿಯುಗೆ ಅಗತ್ಯ ವೈದ್ಯರಿಲ್ಲ. ಆಸ್ಪತ್ರೆಯ ಸ್ಥಿತಿ ಕೋಲಾರ ತರಕಾರಿ ಮಾರುಕಟ್ಟೆಯಂತೆ ಭಾಸವಾಗುತ್ತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಂದಲೇ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನಾನು ಸ್ವತಃ ಹಣ ಹೂಡಿ, ಸ್ನೇಹಿತರಿಂದ ಹಣ ಹಾಕಿಸಿ 90 ಕೋಟಿ ರೂ. ಅನುದಾನ ನೀಡಿದ್ದೇನೆ. ಆದರೆ, ಅದಕ್ಕೆ ಅಗತ್ಯ ಅಭಿವೃದ್ಧಿ ಆಗಿಲ್ಲ. ದೋಷಪೂರಿತ ಮಾಹಿತಿ ಇದಾಗಿದೆ ಎಂದರು. ಸ್ಥಳಕ್ಕೆ ತೆರಳಿದರೆ ಪರಿಸ್ಥಿತಿ ಅರಿವಾಗುತ್ತದೆ. ಇಲ್ಲಿನ ಎಲ್ಲ ಸಮಸ್ಯೆಗೆ ಪರಿಹಾರವಾಗಬೇಕು ಎಂದರು.
ಸಭಾನಾಯಕರು ಮಾತನಾಡಿ, ಮೂರು ರಾಜ್ಯದ 1500 ಮಂದಿ ಹೊರರೋಗಿಗಳಾಗಿ ಭೇಟಿ ನೀಡುತ್ತಾರೆ. 300 ಮಂದಿ ಒಳರೋಗಿಗಳಾಗಿ ಇರುತ್ತಾರೆ. ಅಲ್ಲಿನ ಪರಿಸ್ಥಿತಿ ಅರಿವು ಮೂಡಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳನ್ನು ಕಳುಹಿಸಿ ವರದಿ ತರಿಸುತ್ತೇನೆ. ಗೋವಿಂದರಾಜು ಅವರನ್ನೂ ಜತೆಯಲ್ಲಿ ತೆರಳಲು ವ್ಯವಸ್ಥೆ ಮಾಡುತ್ತೇವೆ. ಅದಾದ ನಂತರವೂ ಸಮಸ್ಯೆ ಉಳಿದರೆ ಮತ್ತೆ ಪರಿಹರಿಸಲು ಯತ್ನಿಸುತ್ತೇವೆ ಎಂದು ಭರವಸೆ ಕೊಟ್ಟರು.