ಬೆಂಗಳೂರು: ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಬಯಲಿಗೆ ಎಳೆಯುವ ಮತ್ತು ತನಿಖೆ ನಡೆಸುವ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ಕಾಲದ ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣಗಳನ್ನು ಬಯಲಿಗೆಳೆಯಬೇಕು. ಆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ ಹಗರಣಗಳನ್ನು ಬಯಲಿಗೆಳೆಯುವ ವಿಚಾರದ ಕುರಿತು ಈಗಲೇ ಹೆಚ್ಚಿನ ವಿವರ ನೀಡಲ್ಲ, ಮುಂದೆ ನಿಮಗೇ ತಿಳಿಯುತ್ತದೆ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್: ಜಲಧಾರೆಯಿಂದ ಮಳೆ ಆಗಿದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಸಿ ಟಿ ರವಿ ವ್ಯಂಗ್ಯವಾಡಿದರು. ಹಾಗಾದರೆ ಅತಿವೃಷ್ಟಿಗೆ ಕುಮಾರಸ್ವಾಮಿ ಕಾರಣ. ಜಲಧಾರೆಯಿಂದ ಮಳೆ ಬಂತು ಎನ್ನುವುದಾದರೆ ರಾಮನಗರದಲ್ಲಿ ಜಾಸ್ತಿ ಮಳೆಯಾಗಿದೆಯಾ ? ಹಾಗಾದರೆ ಪಾಕಿಸ್ತಾನದಲ್ಲೂ ಅತಿವೃಷ್ಟಿ ಆಗಿದೆ. ಪಾಕಿಸ್ತಾನದಲ್ಲೂ ಮಳೆ ಆಗಲಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದರಾ? ಎಂದು ವ್ಯಂಗ್ಯವಾಡಿದರು.
ಅರವಿಂದ್ ಲಿಂಬಾವಳಿ ವರ್ತನೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಸಾರ್ವಜನಿಕವಾಗಿ ಇರುವ ನಾವೆಲ್ಲರೂ ಸಮಾಧಾನದಿಂದ ನಡೆದುಕೊಳ್ಳಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿಯೂ ನಷ್ಟ, ಪಕ್ಷಕ್ಕೂ ನಷ್ಟ. ಲಿಂಬಾವಳಿ ಹಿರಿಯರು, ಸಚಿವರಾಗಿದ್ದವರು. ಲಿಂಬಾವಳಿ ಹೇಳಿಕೆಯನ್ನು ಸಮಗ್ರವಾಗಿ ನೋಡಬೇಕು. ಸಮಗ್ರವಾಗಿ ನೋಡಿದಾಗ ಒಂದು ದೃಷ್ಟಿಕೋನ ಸಿಗುತ್ತದೆ ಎಂದರು.
ಬಿಜೆಪಿಯಿಂದ ಸೇವಾ ಪಾಕ್ಷಿಕ : ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಜನ್ಮದಿನ, ಸೆಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯರ ಜನ್ಮದಿನ. ಅಕ್ಟೋಬರ್ 2 ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ. ಈ ಹಿನ್ನೆಲೆ ಸೇವಾ ಪಾಕ್ಷಿಕವನ್ನು ಬಿಜೆಪಿ ಕಾರ್ಯಕರ್ತರು ಆಚರಿಸುತ್ತೇವೆ. ಸೆ. 17 ರಂದು ರಾಷ್ಟ್ರಾದ್ಯಂತ ಯುವ ಮೋರ್ಚಾದವರು ರಕ್ತದಾನ ಶಿಬಿರ ಮಾಡುತ್ತಾರೆ. ಆರೋಗ್ಯ ಶಿಬಿರ ಆಯೋಜಿಸುತ್ತಾರೆ ಎಂದು ತಿಳಿಸಿದರು.