ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗ್ತಿದೆ. ಈ ಮಧ್ಯೆ SDPI, PFI ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಿಮಿ ಸಂಘಟನೆ ಬ್ಯಾನ್ ಆದ ಬಳಿಕ, SDPI, PFI ಹುಟ್ಟಿಕೊಂಡಿವೆ. ಭಾರತ ತನ್ನೆಲ್ಲಾ ಶಕ್ತಿ ಬಳಸಿಕೊಂಡು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಕೇರಳದ 15ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದಿದೆ. ಪ್ರಚೋದನೆಗೆ ಕಾರಣವಾದ ಮೂಲ ಸಂಗತಿಯನ್ನು ಬೇರು ಸಹಿತ ಕೀಳುವ ಕೆಲಸ ನಡೆಯುತ್ತಿದೆ. PFI, SDPI ಸಂಘಟನೆ ನಿಷೇಧ ಮಾಡುವುದು, ಯು.ಪಿ ಮಾದರಿ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಆ ಬಗ್ಗೆ ಶಿಫಾರಸ್ಸು ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದರು.
ಸಮೂಹ ಸನ್ನಿಗೆ ಒಳಗಾಗಬೇಡಿ :ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡ್ತೀನಿ, ಸಮೂಹ ಸನ್ನಿಗೆ ಒಳಗಾಗಬೇಡಿ. ನಮ್ಮನ್ನು ನಂಬದಿದ್ರೆ, ಕಾಂಗ್ರೆಸ್ ಹಿಂದೂ ಅಂತ ನಂಬ್ತೀರಾ. ಅವರ ಹೇಳಿಕೆ ಗಮನಿಸಿದ್ದೀರಾ?. ನಾವು ಗೋ ಹತ್ಯೆ ನಿಷೇಧ ಅಂದ್ರೆ, ಗೋ ಮಾಂಸ ಹತ್ಯೆಗೆ ಅವಕಾಶ ಅಂದ್ರು. ಅನೇಕ ರೀತಿ ಹೇಳುವವರು ಅಧಿಕಾರಕ್ಕೆ ಬರಬೇಕಾ?. ನಮ್ಮ ಕಾರ್ಯಕರ್ತ ಪ್ರವೀಣ್ ಹತ್ಯೆ ಬಗ್ಗೆ ನಮಗೆ ದುಃಖ ಇದೆ. ನಿಮ್ಮ ಸಮೂಹ ಸನ್ನಿಯಿಂದ ಹಿಂದುತ್ವದ ವಿರೋಧಿಗಳಿಗೆ ಲಾಭ ಆಗಲಿದೆ. 150ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳಿವೆ. ಕಾಶ್ಮೀರ ಪಂಡಿತರ ಹತ್ಯೆ ಯಾಕೆ ಆಯ್ತು?. ದೇಶದಲ್ಲಿ ಹೆದರಿಸಿ ಕೆಲಸ ಸಾಧಿಸಲು ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಡಿ, ಸಿಎಂ ಜೊತೆ ಚರ್ಚೆ ಮಾಡಿದ್ದೇವೆ ಎಂದು ಸಿ ಟಿ ರವಿ ಭರವಸೆ ನೀಡಿದರು.