ಗಾಂಧಿನಗರ ಬೂತ್ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದ ಬಿ ವೈ ವಿಜಯೇಂದ್ರ ಬೆಂಗಳೂರು :ಪ್ರತಿಯೊಬ್ಬ ಕಾರ್ಯಕರ್ತನ ರಕ್ತದ ಕಣಕಣದಲ್ಲಿಯೂ ಹೋರಾಟದ ಗುಣವಿದೆ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನ ಅಬ್ಬರಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದೇವೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟಕ್ಕರ್ ನೀಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬೂತ್ ಅಧ್ಯಕ್ಷ ಶಶಿಧರ್ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಶಶಿಧರ್ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಬಳಿಕ ಕೆಲಕಾಲ ಮಾತುಕತೆ ನಡೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ಭೇಟಿ ಕೊಟ್ಟಿದ್ದೇನೆ, ರಾಜ್ಯದಲ್ಲಿ ಒಟ್ಟಾರೆಯಾಗಿ 58,282 ಬೂತ್ಗಳು ಇವೆ. ಎಲ್ಲಾ ಬೂತ್ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಬೇಕು ಎನ್ನುವ ಸದುದ್ದೇಶದಿಂದ ಇಂದು ಶಶಿಧರ್ ನಿವಾಸಕ್ಕೆ ಭೇಟಿ ನೀಡಿದ್ದೇನೆ, ಕೇಂದ್ರದ ನಾಯಕರಾದ ಅಮಿತ್ ಶಾ, ಜೆಪಿ ನಡ್ದಾ ಅವರಂತೆ ಬೂತ್ ಗೆದ್ದರೆ ದೇಶ ಗೆಲ್ಲುತ್ತೇವೆ ಎನ್ನುವ ಅಭಿಪ್ರಾಯ ಹೊಂದಿದ್ದೇವೆ. ಇದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಕಲ್ಪನೆಯಾಗಿದೆ. ಹಾಗಾಗಿ, ಗಾಂಧಿನಗರ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಇಡೀ ರಾಜ್ಯದಲ್ಲಿರುವ ಎಲ್ಲಾ ಬೂತ್ಗಳಲ್ಲಿ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ :ಶಿವಮೊಗ್ಗ ಜಿಲ್ಲೆಗೆ ಮೂರನೇ ಬಾರಿಗೆ ಒಲಿದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ
ಅಧ್ಯಕ್ಷನಾಗಿ ಮೊದಲ ದಿನ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದೇನೆ. ಇದು ಸಂತೋಷ ತಂದಿದೆ, ರಾಷ್ಟ್ರೀಯ ಘಟಾನುಘಟಿ ನಾಯಕರು ಕೂಡ ಬೂತ್ ಅಧ್ಯಕ್ಷರಾಗಿಯೇ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ಏನು ಮಾನ್ಯತೆ ಇದೆಯೋ, ಹೇಗೆ ಗೌರವ ಕೊಡಲಾಗುತ್ತಿದೆಯೋ ಅದೇ ಗೌರವವನ್ನು ಬೂತ್ನ ಅಧ್ಯಕ್ಷರಿಗೂ ಕೊಡಲಾಗುತ್ತದೆ. ಇದೇ ನಮ್ಮ ಪಕ್ಷದ ವಿಶೇಷತೆ, ಹಾಗಾಗಿ ಈ ಶುಭ ದಿನದಂದು ದೀಪಾವಳಿಯ ಸಂದರ್ಭದಲ್ಲಿ ನಮ್ಮ ಬೂತ್ ಅಧ್ಯಕ್ಷ ಶಶಿಧರ್ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ದೀಪಾವಳಿ ಶುಭಾಶಯ ಸಲ್ಲಿಸಿದ್ದೇನೆ ಎಂದರು.
ಇದನ್ನೂ ಓದಿ :ಮುಂದಿನ ಶುಕ್ರವಾರ ಶಾಸಕಾಂಗ ಸಭೆ ಕರೆದು ಪ್ರತಿಪಕ್ಷ ನಾಯಕನ ಆಯ್ಕೆ : ರಾಜ್ಯಾಧ್ಯಕ್ಷ ವಿಜಯೇಂದ್ರ
ಬಿಜೆಪಿಯ ಕಾರ್ಯಕರ್ತರು ಎಂದಿಗೂ ಕೂಡ ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಪ್ರತಿಯೊಂದು ರಕ್ತದ ಕಣಕಣದಲ್ಲಿಯೂ ಹೋರಾಟದ ಗುಣಗಳಿವೆ, ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ನವರು ಎಷ್ಟೇ ಅಬ್ಬರ ಮಾಡಿದರು ಅದನ್ನು ಮೀರಿ ನಮ್ಮ ಕಾರ್ಯಕರ್ತರು ಬಿಜೆಪಿ ಸಂಘಟನೆ ಮಾಡಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಅಬ್ಬರಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು. ಈ ಬಳಿಕ ಕೇಶವಕೃಪಾದಲ್ಲಿರುವ ಕಚೇರಿಗೆ ಭೇಟಿ ನೀಡಿ ಆರ್ಎಸ್ಎಸ್ ನಾಯಕರ ಜೊತೆ ಮಾತುಕತೆ ನಡೆಸಿದರು.
ಇದನ್ನೂ ಓದಿ :BSY ಪುತ್ರ ಎನ್ನುವ ಕಾರಣಕ್ಕೆ ಅವಕಾಶ ಸಿಗಬೇಕಿದ್ದರೆ ಬೊಮ್ಮಾಯಿ ಸಂಪುಟದಲ್ಲಿ ಇರ್ತಿದ್ದೆ : ಕಾಂಗ್ರೆಸ್ಗೆ ವಿಜಯೇಂದ್ರ ತಿರುಗೇಟು