ಬೆಂಗಳೂರು:ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಇಂದು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಯ್ದೆಯನ್ನು ತರಾತುರಿಯಲ್ಲಿ ತರುವ ಅಗತ್ಯವಿರಲಿಲ್ಲ. ತರಾತುರಿಯಲ್ಲಿ ತಂದಿರುವುದನ್ನು ನೋಡಿದ್ರೆ ಮತ್ತೆ ಜಮೀನ್ದಾರಿ ಪದ್ಧತಿ ಜಾರಿಯಾಗುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.
ಕೊರೊನಾದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಸಂಶಯ, ಅನುಮಾನ ಇರುವ ತಿದ್ದುಪಡಿ, ಸುಗ್ರೀವಾಜ್ಞೆ ತರುವ ಅವಶ್ಯಕತೆ ಏನಿದೆ ಎಂದ ಅವರು, ಸರ್ಕಾರ ಈ ಕಾಯ್ದೆ ಜಾರಿ ಮಾಡಲು ಕೃಷಿ, ರೈತ ಸಂಘಟನೆ ಹಾಗೂ ಕೃಷಿ ತಜ್ಞರ ಜೊತೆ ಚರ್ಚೆ ಮಾಡಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿತ್ತು. ಕೊರೊನಾ ಹರಡುವಿಕೆಗೆ ನಾವೇ ಕಾರಣವಾಗುತ್ತಿದ್ದೇವೆ ಎಂದು ಆರೋಪ ಬರುತ್ತಿದೆ ಎಂದು ಹೇಳಿದರು. 40 ಯುನಿಟ್‌ವರೆಗೆ ಭೂಮಿ ಹೊಂದಲು ತಿದ್ದುಪಡಿಯಲ್ಲಿ ಅವಕಾಶ ನೀಡಲಾಗಿದೆ. 79ಎ ಹಾಗೂ 79ಬಿ ಕಾನೂನಿನಲ್ಲಿ ಕೆಲ ನೂನ್ಯತೆ ಇರುವುದು ನಿಜವೆಂದ ಕುಮಾರಸ್ವಾಮಿ, ಇದನ್ನು ದ್ವೇಷಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಮ್ಮ ಜಮೀನು ಖರೀದಿ ಮಾಡಿದ ವೇಳೆ ಅನುಭವಿಸಿದ ಸಮಸ್ಯೆಗಳನ್ನು ಸದನದ ಮುಂದಿಟ್ಟರು.
ರೈತ ಲಾಭ ಬರಲಿ, ನಷ್ಟ ಆಗಲಿ ಹೊಲದಲ್ಲಿ ದುಡಿಯುತ್ತಾನೆ. ಕೊರೊನಾ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಬೆಂಗಳೂರು ಬಡಾವಣೆಗಾಗಿ ಭೂಮಿ ವಶಪಡಿಸಿಕೊಂಡ ರೈತರಿಗೆ ಏನು ಅನುಕೂಲ ಆಯಿತು ಎಂದು ಪ್ರಶ್ನಿಸಿದರು. ನಾನೇ ರಾಮನಗರದ ಬಳಿ ಜಮೀನು ಖರೀದಿಸಿದಾಗ ಈ ಕಾಯ್ದೆಯಡಿ ತೊಂದರೆಗೆ ಸಿಲುಕಿದ್ದೇನೆ. ಹಾಗಾಗಿ ಈ ಲೋಪದೋಷವನ್ನು ಸರಿಪಡಿಸಲು ಈ ಕಾಯ್ದೆ ಜಾರಿ ಮಾಡಿದ್ದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಬೆಂಗಳೂರು ನಗರದ ಸುತ್ತಮುತ್ತಲಿನ ಜಮೀನು ಖರೀದಿಗೆ ಪೈಪೋಟಿ ಇರಬಹುದು. ಆದರೆ, ಕುಗ್ರಾಮದಲ್ಲಿರುವ ಜಮೀನು ಖರೀದಿಗೆ ಯಾರೂ ಮುಂಬರುವುದಿಲ್ಲ.
ಖರೀದಿ ಮಾಡುವವರು ಲಾಭ ನೋಡುತ್ತಾರೆ. ಹಾಗಾಗಿ, ಎಲ್ಲವನ್ನೂ ನೋಡಿಕೊಂಡು ರೈತರ ಹಿತ ಗಮನದಲ್ಲಿಟ್ಟುಕೊಂಡು ಈ ಕಾಯ್ದೆ ಜಾರಿ ಮಾಡುವುದಾದ್ರೇ ಜಾರಿ ಮಾಡಿ. ಕಾಯ್ದೆಯಲ್ಲಿನ ಲೋಪ-ದೋಷವನ್ನು ಸರಿಪಡಿಸಿದ್ರೆ ಅದಕ್ಕೆ ನನ್ನ ಸ್ವಾಗತ ಇದೆ ಎಂದರು. ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಯಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದನ್ನು ಸರ್ಕಾರ ಹೇಳಿದೆ. ಅದಕ್ಕೆ ವಿರೋಧ ಪಕ್ಷದ ನಾಯಕರು ಪೊಲೀಸ್ ಮತ್ತು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚ ಇಲ್ಲವೇ ಎಂದು ಹೇಳಿದ್ದಾರೆ. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಅರ್ಥವೇ ಇಲ್ಲ. ಭ್ರಷ್ಟಾಚಾರ ಹುಲಿ ಸವಾರಿಯಾದಂತಾಗಿದೆ. ಹಾಗಾದರೆ ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಮಾರ್ಮಿಕವಾಗಿ ನುಡಿದರು.
ಕೊನೆ ದಿನ ಸದನಕ್ಕೆ ಹೆಚ್ಡಿಕೆ :ನಾನು ಕೊನೆ ದಿನ ಸದನಕ್ಕೆ ಬಂದಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸದ್ಯ ಕೊರೊನಾ ಹಾವಳಿಯಿದೆ, ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಮತ್ತು ವೈದ್ಯರ ಸಲಹೆ ಮೇರೆಗೆ ಬರಲು ಸಾಧ್ಯವಾಗಿಲ್ಲ ಅಷ್ಟೇ. ಆದರೆ, ವಿಧಾನಸೌಧದ ತಮ್ಮ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.