ಬೆಂಗಳೂರು : ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆ ಪಟ್ಟಿ ಬಿಡುಗಡೆ ಆಗಲಿದೆ. 200 ಅಭ್ಯರ್ಥಿಗಳ ಆಸುಪಾಸಿನಲ್ಲಿ ಪಟ್ಟಿ ಪ್ರಕಟಗೊಳ್ಳಲಿದ್ದು, ಯಾವುದೇ ಗೊಂದಲ ಇಲ್ಲ. ವಿಳಂಬಕ್ಕೆ ಬಂಡಾಯದ ಬಿಸಿ ಕಾರಣವೂ ಅಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇಂದು ನವದೆಹಲಿಯಿಂದ ವಾಪಸಾದ ನಂತರ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಜೊತೆ ಸುದೀರ್ಘ ಚರ್ಚೆ ಆಗಿದೆ. ಸೀಟುಗಳ ಹಂಚಿಕೆ ಬಗ್ಗೆ ಅಂತಿಮವಾದ ಮಾತುಕತೆ ಆಗಿದೆ. 25-30 ಕ್ಷೇತ್ರ ಬಿಟ್ಟು ಎಲ್ಲಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆ ಆಗಲಿದೆ ಎಂದರು.
ಕನಸು ಕಾಣುವವರಿಗೆ ಅವಕಾಶ ಇಲ್ಲ-ಬಿಎಸ್ವೈ:ಅಭ್ಯರ್ಥಿಗಳ ಹೆಸರು ಕೇಳಿದರೆ ನೂರಕ್ಕೆ ಸರ್ಕಾರ ರಚನೆ ಮಾಡುತ್ತೇವೆ ಅನ್ನೋ ನಂಬಿಕೆ ಇದೆ. ಒಳ್ಳೆಯ ಆಯ್ಕೆ ಮಾಡಿದ್ದೇವೆ. ನಾವೇ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ. ನಾವು ಮುಖ್ಯಮಂತ್ರಿ, ನಾವು ಮಂತ್ರಿ ಅಂತ ಕನಸು ಕಾಣುವವರಿಗೆ ಅವಕಾಶ ಇಲ್ಲ ಎಂದು ಪ್ರತಿಪಕ್ಷಗಳಿಗೆ ಬಿಎಸ್ವೈ ಟಾಂಗ್ ನೀಡಿದರು.