ಬೆಂಗಳೂರು: ನಾವು ಜೆಡಿಎಸ್ ಸೇರಿ ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 10 ಸೀಟು ಸಹ ಬರ್ತಾ ಇರಲಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಸೂಯೆ, ಜಲಸ್ಗೆ ಮದ್ದು ಇಲ್ಲ. ರಾಜ್ಯದಲ್ಲಿ ಬಿಜೆಪಿಯವರು 25 ಸೀಟು ಗೆದ್ದಿದ್ದಾರೆ. 1 ಸೀಟು ಕಾಂಗ್ರೆಸ್ಗೆ ಬಂದಿದೆ. 1 ಸೀಟ್ ಜೆಡಿಎಸ್ಗೆ ಬಂದಿದೆ. ಇನ್ನೊಂದು ಏನೋ ಒಂದು ಸೀಟು ಬಂದಿದೆ. ಲೋಕಸಭಾ ಚುನಾವಣೆ ನಂತರ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ಈಗಾಗಲೇ ಮಹಾರಾಷ್ಟ್ರದಲ್ಲೂ ಅವರಿಗೆ ಹಿನ್ನಡೆ ಆಗಿದೆ, ಹರಿಯಾಣದಲ್ಲೂ ಅವರಿಗೆ ಹಿನ್ನಡೆ ಆಗಿದೆ. ರಾಜಸ್ಥಾನದಲ್ಲೂ ಸೋಲುವುದರ ಜತೆಗೆ ಉತ್ತರ ಭಾರತದಾದ್ಯಂತ ಬಿಜೆಪಿ ನೆಲ ಕಚ್ಚುತ್ತಿದೆ. ದೆಹಲಿಯಲ್ಲೂ ಇವಾಗ ಬಿಜೆಪಿಗೆ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಒಂದು ಸೀಟು ಕಾಂಗ್ರೆಸ್ ಗೆದ್ದಿದೆ ಅಂತಾ ಏನೇನೋ ಡಿಸ್ಟರ್ಬ್ ಮಾಡೋಕೆ ಹೊರಟಿದ್ದಾರೆ ಎಂದರು.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ:
ಬಿಜೆಪಿಯವರು ಎಂದು ನೇರವಾಗಿ ಹೇಳದೇ ಆರೋಪಿಸಿದ ಡಿಕೆಶಿ, ಆರ್ಎಸ್ಎಸ್ ಮುಂದೆ ಬಿಟ್ಟು ಏನೇನೋ ಮಾಡ್ತಿದ್ದಾರೆ. ಜನರ ಭಾವನೆ ಕೆರಳಿಸಲ ಹೊರಟಿದ್ದಾರೆ. ಪಥ ಸಂಚಲನ ಆದ್ರೂ ಮಾಡಿಕೊಳ್ಳಲಿ. ಚೆಡ್ಡಿಯಾದ್ರು ಹಾಕಿಕೊಳ್ಳಲಿ, ಪಂಚೆಯಾದ್ರು ಹಾಕಿಕೊಳ್ಳಲಿ, ಮಾವಿನ ಹಣ್ಣು ಕೆಂಪಗೆ ಇದ್ರೆ ನೋಡ್ತಾರೆ. ಮನುಷ್ಯ ಬೆಳ್ಳಗೆ, ಸ್ಟ್ರಾಂಗ್ ಇದ್ರೆ ನೋಡ್ತಾರೆ. ಪಾಪ ನನ್ನ ತಮ್ಮ ಜನರ ಪರ ಕೆಲಸ ಮಾಡ್ತಿದ್ದಾನೆ. ಆದರೆ ಅದನ್ನು ಸಹಿಸದೇ ಈ ರೀತಿ ತಂತ್ರ ಮಾಡ್ತಿದ್ದಾರೆ. ಇವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ನಮ್ಮ ರಾಜಕೀಯ ಮಾಡ್ತೀವಿ. ಪಥ ಸಂಚಲನ ಆದರೂ ಮಾಡಲಿ, ಉರುಳು ಸೇವೆಯಾದ್ರು ಮಾಡಲಿ, ಎಲ್ಲರಿಗೂ ಕಾವಿಯನ್ನಾದ್ರು ತೊಡಿಸಲಿ. ಆದರೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಟಾಂಗ್ ಕೊಟ್ಟರು.
ಆರ್ಎಸ್ಎಸ್ ಚಿಂತನೆಗಳು ನನಗೂ ಗೊತ್ತಿವೆ. ಬಿಜೆಪಿ ಆರ್ಎಸ್ಎಸ್ ಮುಂದೆ ಬಿಟ್ಟು ಜನರ ಧರ್ಮದ ಮೇಲೆ ಏನೋ ಮಾಡೋಕೆ ಹೊರಟಿದ್ದಾರೆ. ಆದರೆ ಅದಕ್ಕೆ ನಾವೇನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದರು.
ಊಟ ಹಾಕಿಸುವೆ:
ಕಳೆದ ಬಾರಿ ಕನಕಪುರದಲ್ಲಿ ಜಾಥಾ ಮಾಡಿದಾಗ ಎಷ್ಟು ಜನ ಭಾಗವಹಿಸಿದ್ರು ಎಂದು ವೀಡಿಯೋ ಹಾಕಲಿ. ಅವರ ಜಾಥಾಕ್ಕೆ ಜನರು ಎಲ್ಲೆಲ್ಲಿಂದ ಬಂದ್ರು ಅಂತಾ ಪೊಲೀಸರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಜನರು ಬಂದಿರೋದನ್ನು ನಾನು ವಿಡಿಯೋ ಮಾಡಿ ಇಡಿಸಿದ್ದೇನೆ. ಇವಾಗ ಎಲ್ಲಿಂದ ಆದರೂ ಜನರನ್ನು ಕರೆ ತರಲಿ. ಉತ್ತರ ಪ್ರದೇಶದಿಂದ ಆದರೂ ಬರಲಿ, ರಾಮನಗರದಿಂದ ಆದರೂ ಬರಲಿ, ಆನೇಕಲ್ನಿಂದ ಆದರೂ ಬರಲಿ. ಆದರೆ ನನಗೇನು ಅಭ್ಯಂತರ ಇಲ್ಲ. ಬೆಂಗಳೂರಿಂದ ಆದರೂ ಕರೆದುಕೊಂಡು ಹೋಗಲಿ. ಮಂಗಳೂರಿಂದ ಆದರೂ ಕರೆದುಕೊಂಡು ಹೋಗಲಿ. ಬೇಕಿದ್ರೆ ಜನರನ್ನು ಕರೆತರಲು ನನಗೆ ಹೇಳಲಿ. ಜಾಥಾಕ್ಕೆ ಬರುವ ಜನರಿಗೆ ನಾನೇ ಊಟದ ವ್ಯವಸ್ಥೆ ಮಾಡಿಕೊಡ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.