ಬೆಂಗಳೂರು:ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಸರ್ಕಾರದ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ, ಕೋವಿಡ್ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಿತರ ವಿಚಾರಗಳ ಬಗ್ಗೆ ಸೋಮವಾರ ಹಿರಿಯ ಮುಖಂಡರ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಸೋಂಕಿತರು ಬಳಸಿದ ಬೆಡ್ ಹಾಸ್ಟೆಲ್ ಮಕ್ಕಳಿಗೆ ನೀಡುವುದರ ವಿರುದ್ಧ ಆಂದೋಲನ: ಡಿಕೆಶಿ ಸರ್ಕಾರ 10 ಸಾವಿರವೋ 20 ಸಾವಿರವೋ ಹಾಸಿಗೆಗಳನ್ನು ಖರೀದಿಸುತ್ತಿದೆ. ಮೊದಲು 1ಕ್ಕೆ 3ರಷ್ಟು ದರ ನಿಗದಿ ಮಾಡಿ ಬಾಡಿಗೆಗೆ ಎಂದರು. ಈಗ ಖರೀದಿ ಮಾಡುತ್ತಾರಂತೆ. ಅವುಗಳನ್ನು ಕೋವಿಡ್ ಸೋಂಕಿತರು ಬಳಸಿದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡಲು ಅಧಿಕಾರಿಗಳು ಮಾಡಿರುವ ಸಲಹೆಯನ್ನು ಸರ್ಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಈ ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತಿಕೆ ಇರಬೇಕು. ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿರುವ ಈ ಸರ್ಕಾರ ಈಗ ಸೋಂಕಿತರು ಬಳಸಿದ ಹಾಸಿಗೆ ವಸ್ತುಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳು, ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೇನಾದರೂ ಬುದ್ಧಿ ಇದೆಯೇ? ಇವರು ಎಂತೆಂಥ ಸಲಹೆಗಾರರು, ಅಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ, ಸರ್ಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ ಎಂದರು.
ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಆ ಹಾಸಿಗೆಗಳನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಿ. ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಮನೆಗೆ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಿ. ಅವರ ಮಕ್ಕಳಿಗೆ ಕೊಡಲಿ. ಆದರೆ ಹಳ್ಳಿ ಮಕ್ಕಳು ಹಾಗೂ ವಿದ್ಯಾರ್ಥಿ ಹಾಸ್ಟೆಲ್ಗಳಲ್ಲಿ ಇವುಗಳನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಮಕ್ಕಳನ್ನು ಸೋಂಕಿನ ಅಪಾಯಕ್ಕೆ ದೂಡಲು ಬಿಡಲ್ಲ. ವಿದ್ಯಾರ್ಥಿಗಳು, ಪೋಷಕರು, ಯುವಕರು, ಹೆಣ್ಣುಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕು, ಹೋರಾಡಬೇಕು ಎಂದರು.
ಕೋವಿಡ್ ಸಲಕರಣೆಗಳ ಖರೀದಿ ಅಕ್ರಮ ಆರೋಪಕ್ಕೆ ಸಚಿವರು ನೀಡಿರುವ ಸ್ಪಷ್ಟನೆ, ವಿವರಣೆ ಕುರಿತು ಮಾತನಾಡಿದ ಶಿವಕುಮಾರ್ ಅವರು, ನಮ್ಮ ಬಳಿ ದಾಖಲೆಗಳಿವೆ. ಯಾರು ಏನು ಮಾಡಿದ್ದಾರೆಂಬ ಬಗ್ಗೆ ವಿವರಗಳಿವೆ. ಒಂದೇ ವಸ್ತುವಿಗೆ ತಮಿಳುನಾಡಿನಲ್ಲಿ ಎಷ್ಟು, ಇಲ್ಲೆಷ್ಟು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅವರು ಹೇಳುವುದನ್ನು ಹೇಳಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ಜನರ ಬಳಿ ಇಡುತ್ತೇವೆ ಎಂದು ವಿವರಿಸಿದರು.