ಬೆಂಗಳೂರು:ನಮಗೆ ದೊಡ್ಡ ಮಟ್ಟದ ನಾಯಕರು ಬೇಕೆಂದೇನಿಲ್ಲ. ಕಾರ್ಯಕರ್ತರ ದುಡಿಮೆ ಮೇಲೆ ನಮ್ಮ ಪಕ್ಷ ನಿಂತಿದೆ. ಜನರ ಜೊತೆ ಬೆರೆತು ಕೆಲಸ ಮಾಡುವ ಯುವಕರು ಬೇಕು ಎಂದು ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹು-ಧಾ, ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾವಾರು ಸಭೆ ನಡೆಸಿ ಅವರು ಮಾತನಾಡಿದರು. ತಿದ್ದಿಕೊಳ್ಳುವ ಅವಕಾಶ ಈಗ ಇದೆ. ಯುವಕರು ಜನರ ಜೊತೆ ಬೆರೆತು ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುವ ಮೂಲಕ ನಾಯಕತ್ವ ಬೆಳೆಸಿಕೊಳ್ಳಿ. ನೀವು ಕಷ್ಟಪಟ್ಟು ಕೆಲಸ ಮಾಡಿ ಜನರು ನಿಮ್ಮನ್ನು ಗುರುತಿಸುತ್ತಾರೆ. ಅದನ್ನು ನೀವು ಬಳಕೆ ಮಾಡಿಕೊಳ್ಳಬೇಕು ಎಂದು ಯುವ ಮುಖಂಡರಿಗೆ ಹೆಚ್ಡಿಕೆ ಸಲಹೆ ನೀಡಿದರು.
ಚುನಾವಣೆ ಘೋಷಣೆಯಾದಾಗ ಮಾತ್ರ ನಾನು ಪಕ್ಷದಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಸಿಗಲಿಲ್ಲ ಎಂಬಂತೆ ಆಗಬಾರದು. ನಿಮಗೆ ಎಲ್ಲ ರೀತಿಯ ಶಕ್ತಿ ತುಂಬಲು ತಯಾರಾಗಿದ್ದೇನೆ. ಕಾಂಗ್ರೆಸ್, ಬಿಜೆಪಿ ರೀತಿ ನಾವು ಸುಳ್ಳು ಹೇಳಿಲ್ಲ. ಸ್ವತಂತ್ರ ಸರ್ಕಾರ ಬರದಿದ್ದರೂ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳಿದರು.