ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಉಪಚುನಾವಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಅ.14 ರಂದು ನಾಮಪತ್ರ ಸಲ್ಲಿಸುತ್ತೇವೆ. ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚಿಸಿದ್ದೇವೆ. ಬೂತ್ ಮಟ್ಟದಿಂದ ಹಿಡಿದು ಎಲ್ಲದರ ಕುರಿತು ಚರ್ಚಿಸಿದ್ದೇವೆ. ನಮಗೆ ಬಿಜೆಪಿಯಿಂದ ಅಂತಹ ಕಠಿಣ ಸ್ಪರ್ಧೆ ಇಲ್ಲ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಾರೆ. ನಮ್ಮ ಅಭ್ಯರ್ಥಿ ಪರ ನಾವು ಕೆಲಸ ಮಾಡುತ್ತೇವೆ ಎಂದರು.
ಜೆಡಿಎಸ್ನವರು ಸಹ ಅಭ್ಯರ್ಥಿಯನ್ನು ಕಣಕ್ಕಿಸುತ್ತಾರೆ. ಯಾವುದೇ ಕಾರಣಕ್ಕೂ ಅವರು ಬಿಜೆಪಿಗೆ ಬೆಂಬಲಿಸುವುದಿಲ್ಲ. ಎರಡೂ ಉಪ ಕದನದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಿ ಎಂದು ಹೇಳಿದರು.
ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮುಸ್ಲಿಂ ಸಮುದಾಯದ ಮತ ಸೆಳೆಯೋಕೆ ಜವಾಬ್ದಾರಿ ಕೊಟ್ಟಿಲ್ಲ. ನಾವು ಒಂದು ಸಮುದಾಯ ಅಂತ ಯಾಕೆ ಹೋಗ್ಬೇಕು? ನಮಗೆ ಎಲ್ಲರ ಮತಗಳು ಮುಖ್ಯ. ಆ ನಿಟ್ಟಿನಲ್ಲೇ ನಾವು ಒಟ್ಟಾಗಿ ಕೆಲಸ ಮಾಡ್ತೇವೆ. ಮುಸ್ಲಿಂ ಸಮುದಾಯದಲ್ಲಿ ನಾನೊಬ್ಬನೇ ಇಲ್ಲ. ಜಮೀರ್, ರಿಜ್ವಾನ್ ಎಲ್ಲರೂ ನಾಯಕರೇ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಕೆಲಸ ಮಾಡ್ತೇವೆ. ಜಮೀರ್ ಕಾಣ್ತಿಲ್ಲ ಅನ್ನೋದಕ್ಕೆ ಅಪಾರ್ಥ ಬೇಡ ಎಂದರು.